ಮನಮೋಹನ್ ಸಿಂಗ್ ನಿಧನ ಹೊಂದಿಲ್ಲ, ಅವರ ಕೆಲಸಗಳ ಮೂಲಕ ಜೀವಂತವಾಗಿದ್ದಾರೆ: ಡಿ.ಕೆ.ಶಿವಕುಮಾರ್​ ಭಾವುಕ | Manmohan Singh

dk (46) (1)
Published on

ಬೆಳಗಾವಿ:ಮನಮೋಹನ್ ಸಿಂಗ್(Manmohan Singh) ಅವರು ನಿಧನ ಹೊಂದಿಲ್ಲ. ಅವರ ಕೆಲಸಗಳ ಮೂಲಕ ಎಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ. ಜನಸಾಮಾನ್ಯನಿಗೆ ಆಹಾರದ ಹಕ್ಕನ್ನು ಸಂವಿಧಾನಾತ್ಮಕವಾಗಿ ನೀಡಿದವರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ದಿವಂಗತ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಅವರ ಶ್ರದ್ಧಾಂಜಲಿ ಸಭೆಯ ಬಳಿಕ ಶುಕ್ರವಾರ ಮಾಧ್ಯಮಗಳಿಗೆ ಮಾತನಾಡಿದರು.

ಅವರು ಜಾರಿಗೆ ತಂದ ಅನೇಕ ಯೋಜನೆಗಳನ್ನು ಯಾವ ಸರ್ಕಾರವು ನಿಲ್ಲಿಸಲು ಆಗುವುದಿಲ್ಲ. ಆಧಾರ್ ಯೋಜನೆ, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಶಾ ಕಾರ್ಯಕರ್ತರ ಯೋಜನೆ, ನರೇಗಾ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ರೈತರಿಗೆ ಸಂಕಷ್ಟದ ಹೊತ್ತಿದಲ್ಲಿ ಪರಿಹಾರ ಪ್ಯಾಕೇಜ್ ನೀಡುವ ಮೂಲಕ ಅವರ ಬೆನ್ನಿಗೆ ನಿಂತ ಶಕ್ತಿ ಮನಮೋಹನ್ ಸಿಂಗ್ ಅವರು ಎಂದು ವಿವರಿಸಿದರು.

ರೈತರ ಸಾಲ ಮನ್ನಾ ಮಾಡಿದ ಧೀಮಂತ

ಅನೇಕ ಬಾರಿ ಕೇವಲ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲಗಳನ್ನು ಮಾತ್ರ ಮನ್ನಾ ಮಾಡಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಮೊಟ್ಟಮೊದಲ ಬಾರಿಗೆ 70,000 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದವರು ಎಂದು ಡಿಸಿಎಂ ಡಿಕೆಶಿ ಹೇಳಿದರು.

ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಅವರ ಕಾರ್ಯಕ್ರಮಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶ ಗಳನ್ನು ಉಳಿಸುವ ಕೆಲಸ ಮಾಡಬೇಕು. ನಾವೆಲ್ಲರೂ ಇವರ ಹಾದಿಯಲ್ಲಿ ನಡೆಯೋಣ ಎಂದು ಆಶಿಸುತ್ತೇನೆ. ಅತ್ಯಂತ ಗೌರವ ಪೂರಕವಾಗಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net