ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞ ಮನಮೋಹನ್​ ಸಿಂಗ್​: CM Siddaramaiah

dk (43) (1)
Published on

ಬೆಳಗಾವಿ: ಮನಮೋಹನಸಿಂಗ್ ವಿಶ್ವಶ್ರೇಷ್ಠ ಆರ್ಥಿಕ ತಜ್ಞಾರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದರು.

ಸಿಪಿಇಡಿ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಮನಮೋಹನ್ ಸಿಂಗ್ ಅವರ ಬದುಕಿನ ಮಾರ್ಪಾಡು ನೋಡಿದಾಗ ಆಶ್ಚರ್ಯ ಆಗತ್ತೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿ, ದೇಶ ಕಂಡ ವಿಶ್ವಶ್ರೇಷ್ಠ  ಆರ್ಥಿಕ ತಜ್ಞರಾಗಿ ಎರಡು ಬಾರಿ ದೇಶದ ಪ್ರಧಾನಿಯಾದರು. ಇವರಿಗಿಂತ ದೊಡ್ಡ ಆರ್ಥಿಕ ತಜ್ಞರು ಇರಬಹುದು. ಆದರೆ, ಬಹಳ ಮೃದು ಸ್ವಭಾವದ, ಮಿತ ಭಾಷಿಯಾಗಿ ಮಧ್ಯಮ ಮತ್ತು ಬಡ ಜನರ ದೃಷ್ಟಿಯಿಂದ ಈ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು ಎಂದರು.

ನಾನು ಹಲವು ಬಾರಿ ಇವರನ್ನು ಭೇಟಿಯಾಗಿದ್ದೆ. ಸಂಯಮದಿಂದ ನಮ್ಮ ಮಾತನ್ನು ಕೇಳಿಸಿಕೊಂಡು ಬಳಿಕ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಿದ್ದರು. ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದರು. RBI ಗವರ್ನರ್ ಆಗಿ, ಆರ್ಥಿಕ ಸಚಿವರಾಗಿ, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಎಲ್ಲಾ ಹುದ್ದೆಗಳಿಗೂ ಪ್ರಾಮಾಣಿಕ ನ್ಯಾಯ ಒದಗಿಸಿದರು ಎಂದು ಹೇಳಿದರು.

ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಡವಾಗಿ ಮುನ್ನಡೆಸಿದರು. ಭಾರತ ಆರ್ಥಿಕ ಸಂಕಷ್ಟದಲ್ಲಿದ್ದಾಗ ಉದಾರೀಕರಣ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು. ಮನಮೋಹನ್ ಸಿಂಗ್ ಅವರಿಗಿಂತ ಮೊದಲು ದೇಶದ ಆರ್ಥಿಕತೆಯನ್ನು ವಿಶ್ವ ಆರ್ಥಿಕತೆ ಜೊತೆಗೆ ಮುಕ್ತ ಮಾಡಿರಲಿಲ್ಲ. ಇವರು ಮುಕ್ತಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು ಎಂದು ಸಿಎಂ ಹೇಳಿದರು.

ದೇಶದ ಆರ್ಥಿಕ ಸಮಸ್ಯೆಗಳನ್ನು ನಿಖರವಾಗಿ ಗ್ರಹಿಸಿ, ಪರಿಹರಿಸುತ್ತಿದ್ದ ಅವರು ನಿಗರ್ವಿ ಆಗಿದ್ದರು. ಅತ್ಯಂತ ವಿನಯಶೀಲರಾಗಿದ್ದರು. ನಾನು ಬದುಕಿರುವಾಗ ನನ್ನ ಕೆಲಸಗಳಿಗೆ ಹೆಚ್ಚು ಮಾನ್ಯ ಸಿಗದಿದ್ದರೂ ಮುಂದೆ ನಮ್ಮ ಕೆಲಸಗಳಿಗೆ ಹೆಚ್ಚು ಮಹತ್ವ ಸಿಗಲಿದೆ ಎಂದು ಮನಮೋಹನ್ ಸಿಂಗ್ ಅವರು ಅವತ್ತೇ ಹೇಳಿದ್ದರು‌ ಎಂದು ಸಿಎಂ ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net