Manmohan Singh Funeral | ಮಾಜಿ ಪ್ರಧಾನಿ ಮನಮೋಹನ್​​ ಸಿಂಗ್ ಅವರ​ ಅಂತ್ಯಕ್ರಿಯೆ ಯಾವಾಗ & ಎಲ್ಲಿ ನಡೆಯಲಿದೆ; ಸರ್ಕಾರಿ ಪ್ರೋಟೋಕಾಲ್ ಏನು? ಇಲ್ಲಿದೆ ಮಾಹಿತಿ

Untitled design (25)
Published on

ನವದೆಹಲಿ: ಭಾರತದ ಮಾಜಿ ಪ್ರಧಾನಿ ಮತ್ತು ಭಾರತದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಮನಮೋಹನ್ ಸಿಂಗ್ ಅವರು ಗುರುವಾರ(ಡಿಸೆಂಬರ್​ 26) ರಾತ್ರಿ ದೆಹಲಿಯ ಏಮ್ಸ್‌ನಲ್ಲಿ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ಏಮ್ಸ್​​​ನಿಂದ ಇಲ್ಲಿಗೆ ತರಲಾಯಿತು. ಇಂದು ಅಂದರೆ ಶುಕ್ರವಾರ(ಡಿಸೆಂಬರ್​ 27) ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು. ಅಲ್ಲಿ ಸಾಮಾನ್ಯ ಜನರು ಮತ್ತು ಗಣ್ಯರು ಅವರಿಗೆ ಗೌರವ ಸಲ್ಲಿಸಲು ಸಾಧ್ಯವಾಗುತ್ತದೆ.(Manmohan Singh Funeral)

ಅಂತ್ಯಕ್ರಿಯೆ ಯಾವಾಗ ನಡೆಯಲಿದೆ?

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ(ಡಿಸೆಂಬರ್​ 28) ನಡೆಯಲಿದೆ. ಇದರ ಅಧಿಕೃತ ಘೋಷಣೆ ಇಂದು ಅಂದರೆ ಶುಕ್ರವಾರ ಹೊರಬೀಳಬಹುದು. ಗುರುವಾರ ತಡರಾತ್ರಿ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ಅದನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರ ರದ್ದುಗೊಳಿಸಿದೆ. ಬೆಳಗಾವಿಯಲ್ಲಿ ನಡೆಯುತ್ತಿದ್ದ ಸಿಡಬ್ಲ್ಯುಸಿ ವಿಶೇಷ ಸಭೆಯನ್ನು ಕಾಂಗ್ರೆಸ್ ರದ್ದುಗೊಳಿಸಿದ್ದು ಎಲ್ಲಾ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ.

ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ?

ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮೂಲಗಳು ಹೇಳಿವೆ. ಸಾಮಾನ್ಯವಾಗಿ ದೇಶದ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆ ದೆಹಲಿಯಲ್ಲಿಯೇ ವಿಶೇಷ ಸ್ಥಳದಲ್ಲಿ ನಡೆಯುತ್ತದೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಂತ್ಯಕ್ರಿಯೆಯನ್ನು ರಾಜ್‌ಘಾಟ್ ಸಂಕೀರ್ಣದಲ್ಲಿಯೇ ನೆರವೇರಿಸಲಾಯಿತು. ಅಲ್ಲದೆ ಅನೇಕ ಮಾಜಿ ಪ್ರಧಾನಿಗಳಿಗಾಗಿ ಪ್ರತ್ಯೇಕ ಸಮಾಧಿಯನ್ನು ಸಹ ನಿರ್ಮಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಯನ್ನು ಯಾವಾಗಲೂ ಅಟಲ್ ಎಂದು ಕರೆಯಲಾಗುತ್ತದೆ. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುಟುಂಬದ ಒಪ್ಪಿಗೆಯೊಂದಿಗೆ ಮಾತ್ರ ಅಂತ್ಯಕ್ರಿಯೆ ನೇರವೆರಿಸುವ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಅನೇಕ ಬಾರಿ ಅಂತ್ಯಕ್ರಿಯೆಗಳನ್ನು ತವರು ರಾಜ್ಯದಲ್ಲಿಯೂ ಮಾಡಲಾಗುತ್ತದೆ. ಸ್ಥಳ ಇನ್ನೂ ಅಂತಿಮಗೊಂಡಿಲ್ಲ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಇಂದು (ಶುಕ್ರವಾರ, ಡಿಸೆಂಬರ್​​27) ಪ್ರಕಟಿಸುವ ನಿರೀಕ್ಷೆಯಿದೆ.

ಮಾಜಿ ಪ್ರಧಾನಿ ಅಂತ್ಯಕ್ರಿಯೆಯಲ್ಲಿ ಪ್ರೋಟೋಕಾಲ್ ಏನು?

  • ಭಾರತದಲ್ಲಿ ಮಾಜಿ ಪ್ರಧಾನಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ವಿಶೇಷ ರಾಜ್ಯ ಪ್ರೋಟೋಕಾಲ್ ಅನ್ನು ಅನುಸರಿಸಲಾಗುತ್ತದೆ. ದೇಶಕ್ಕೆ ಅವರ ಕೊಡುಗೆ ಮತ್ತು ಅವರ ಸ್ಥಾನದ ಘನತೆಯನ್ನು ಗೌರವಿಸುವುದು ಇದರ ಉದ್ದೇಶವಾಗಿದೆ.
  • ಅಂತ್ಯಕ್ರಿಯೆಯ ಮೊದಲು ಮಾಜಿ ಪ್ರಧಾನಿಯ ಪಾರ್ಥೀವ ಶರೀರವನ್ನು ಭಾರತದ ರಾಷ್ಟ್ರಧ್ವಜದಲ್ಲಿ ಅಂದರೆ ತ್ರಿವರ್ಣ ಧ್ವಜದಲ್ಲಿ ಸುತ್ತಿಡಲಾಗುತ್ತದೆ.
  • ಇದಲ್ಲದೆ ಅಂತ್ಯಕ್ರಿಯೆಯ ಸಮಯದಲ್ಲಿ ಅವರಿಗೆ 21-ಗನ್ ಸೆಲ್ಯೂಟ್ ಅನ್ನು ಸಹ ನೀಡಲಾಗುತ್ತದೆ. ಈ ಸೆಲ್ಯೂಟ್ ಅನ್ನು ಅತ್ಯುನ್ನತ ಮಟ್ಟದ ರಾಜ್ಯ ಗೌರವದ ಸಂಕೇತವೆಂದು ಪರಿಗಣಿಸಲಾಗಿದೆ.
  • ಮಾಜಿ ಪ್ರಧಾನಿಯವರ ಅಂತ್ಯಕ್ರಿಯೆ ಸಮಯದಲ್ಲಿ ಭದ್ರತೆ ಮತ್ತು ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಅವರ ಅಂತಿಮ ಯಾತ್ರೆಯಲ್ಲಿ ಜನಸಾಮಾನ್ಯರಿಂದ ಹಿಡಿದು ಗಣ್ಯರು, ರಾಜಕಾರಣಿಗಳು ಭಾಗವಹಿಸುತ್ತಾರೆ.
  • ಇದಲ್ಲದೆ ಮಿಲಿಟರಿ ಬ್ಯಾಂಡ್‌ಗಳು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಕೂಡ ಕೊನೆಯ ಪ್ರಯಾಣದಲ್ಲಿ ಭಾಗವಹಿಸುತ್ತಾರೆ ಮತ್ತು ಸಾಂಪ್ರದಾಯಿಕ ಮೆರವಣಿಗೆಯನ್ನು ಮಾಡುತ್ತಾರೆ.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net