ರಾಷ್ಟ್ರಪತಿ ಭವನದಲ್ಲಿ ನಾಳೆ ನಡೆಯಲಿರುವ ಔತಣಕೂಟಕ್ಕೆ ಗೈರಾಗಲು ಪ್ರತಿಪಕ್ಷ ನಾಯಕರ ನಿರ್ಧಾರದ ಹಿಂದಿನ ಕಾರಣ ಇದು...

Manmohan Singh
Published on

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಾಳೆ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗಿನ ಔತಣಕೂಟದಲ್ಲಿ ಭಾಗವಹಿಸದಿರಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಟ್ರಂಪ್​ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಬಗ್ಗೆ ಅವರಿಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಸಿಂಗ್​ ಔತಣಕೂಟಕ್ಕೆ ಗೈರಾಗಲಿದ್ದಾರೆ. ಅಲ್ಲದೆ ಪ್ರತಿಪಕ್ಷಗಳ ಜತೆಗೆ ಟ್ರಂಪ್​ ಅವರೊಡನೆ ಯಾವ ಸಭೆಗಳು ನಡೆಯುವುದಿಲ್ಲ.

ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಮ್​ ನಬಿ ಅಜಾದ್​ ಅವರು ಕೂಡ ರಾಷ್ಟ್ರಪತಿ ಭವನದಲ್ಲಿ ನಾಳೆ ನಡೆಯಲಿರುವ ಔತಣಕೂಟದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಅಲ್ಲದೆ ನಾಳೆ ಬೆಳಗ್ಗೆ ಮೆಲಾನಿಯಾ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಮತ್ತು ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಗೂ ಆಮಂತ್ರಣ ಇಲ್ಲದಿರುವುದು ಆಪ್​ನ ಬೇಸರಕ್ಕೆ ಕಾರಣವಾಗಿದೆ.

ಆದರೆ ಇದಕ್ಕೆ ಯುಎಸ್​ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದ್ದು, ಮೆಲಾನಿಯಾ ಅವರ ಶಾಲೆ ಭೇಟಿ ರಾಜಕೀಯವಲ್ಲ ಎಂದಿದೆ.

ಆದರೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಉಪಸ್ಥಿತಿಯನ್ನು ನಿರೀಕ್ಷಿಸಲಾಗುವುದು. ಇದು ರಾಜಕೀಯ ಅಲ್ಲವಾದರೂ ಶಾಲೆ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದ ಅವರ ನಡೆಯನ್ನು ಯುಎಸ್​ ರಾಯಭಾರ ವಕ್ತಾರರು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net