ಸಮಸ್ಯೆಯಲ್ಲೂ ಸದವಕಾಶ ಕಾಣುವ ಜಾಣ್ಮೆಯಿರೆ ಜಗತ್ತು ಸುಂದರ

sudina kaggada belaku 13 feb
Published on
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ

ಸನ್ನಾಹ ಸಾಗೀತೆ? ದೈವವೊಪ್ಪೀತೆ?

ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ,

ನಿನ್ನ ಬಲವನು ಮೆರೆಸೊ-ಮಂಕುತಿಮ್ಮ

ನಿನ್ನ ಹೆಗಲಿನ ಹೊರೆಯನ್ನು ದೇವರ ಭುಜಕ್ಕೇರಿಸುವ ಪ್ರಯತ್ನವು ಸಾಧ್ಯವಾದೀತೇನು? ಇದಕ್ಕೆ ದೇವರು ಒಪ್ಪಬಹುದೇನು? ನಿನ್ನ ಬೇಡಿಕೆಯನ್ನು ವಿಧಿಯು ಒಪ್ಪಿಕೊಳ್ಳಲಿ ಅಥವಾ ಬಿಡಲಿ, ನಿನ್ನ ಬಲವನ್ನು ನೀನು ಮೆರೆಸು ಎನ್ನುತ್ತದೆ ಈ ಕಗ್ಗ. ದೇವರ ಮೇಲೆ ಭಾರ ಹಾಕಿ ಕೆಲಸವನ್ನು ಆರಂಭಿಸಿದ್ದೇವೆ. ಗೆಲ್ಲಿಸುವುದು ಅವನ ಹೊಣೆ ಎಂಬ ಕಾರ್ಯಜಾಣ್ಮೆಯ ಮಾತನ್ನು ಆಡುವವರಿದ್ದಾರೆ. ಕೆಲವರು ದೇವರಿದ್ದಾನೆ ಎಂದಾದರೆ ಮಹಿಮೆಯನ್ನು ತೋರುತ್ತಾನೆ, ಬೇಡಿಕೊಂಡದ್ದನ್ನು ನೆರವೇರಿಸುತ್ತಾನೆ ಎಂದು ಸವಾಲಿನ ಮಾತು

ಗಳನ್ನಾಡುವುದೂ ಇದೆ. ಲೌಕಿಕದ ಬೇಕು-ಬೇಡಗಳಿಗೆ ದೇವರನ್ನು ಕೆಲಸದವನಂತೆ ಬಳಸಿಕೊಳ್ಳುವ ಈ ಮನ@ಸ್ಥಿತಿಯನ್ನು ಭಕ್ತಿ ಎನ್ನೋಣವೇ? ಅಚಲವಾದ ನಂಬಿಕೆಯು ದೇವರನ್ನು ಹೊಣೆಗಾರನನ್ನಾಗಿ ಮಾಡುತ್ತಿದೆಯೇ? ಖಂಡಿತಾ ಇಲ್ಲ. ಬೇಡಿಕೊಂಡದ್ದು ಈಡೇರದೇ ಹೋದರೆ, ತೊಡಗಿದ ಕಾರ್ಯವು ಸೋತರೆ ನಂಬಿಕೆಯಮಟ್ಟವೂ ಕಡಿಮೆಯಾಗುತ್ತದೆ. ದೇವರಿಗೆ ಕರುಣೆ ಇಲ್ಲವೆಂದೋ, ಪಪಾತಿಯೆಂದೋ ದೂರಿಕೊಳ್ಳುವುದಿದೆ. ದೇವರೇ ಇಲ್ಲ ಎಂದು ದೂಷಿಸುವುದೂ ಇದೆ. ಒಂದುವೇಳೆ ಬೇಡಿದ್ದು ಫಲಿಸಿತೆಂದಾರೆ ದೇವರನ್ನು ನೆನಪಿಸಿಕೊಳ್ಳದ ದಾರ್ಷ್ಯವೂ ಸಾಮಾನ್ಯ.

ವಿದ್ಯಾರ್ಥಿಯು ಅಧ್ಯಯನದಲ್ಲಿ ಉದಾಸೀನ ಮಾಡಿ, ಪರೀಕ್ಷೆಯ ದಿನ ನಾನು ಉತ್ತೀರ್ಣನಾಗುವಂತೆ ಮಾಡು ಎಂದು ಹರಕೆ ಹೊತ್ತರೆ, ಕಣ್ಣೀರಿಟ್ಟು ಬೇಡಿಕೊಂಡರೆ ದೇವರು ಒಲಿಯುವನೇನು? ತನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರಷ್ಟೇ ಗೆಲುವು ಸಾಧ್ಯ. ಕೆಲವೊಮ್ಮೆ ಶ್ರದ್ಧೆಯಿಂದ ಅಭ್ಯಾಸವನ್ನು ಮಾಡಿದ್ದರೂ ಅನುತ್ತೀರ್ಣನಾಗಬಹುದು ಅಥವಾ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದ ಪರಿಸ್ಥಿತಿಯೂ ಎದುರಾಗಬಹುದು. ಅಷ್ಟಕ್ಕೆ ನಿರಾಶರಾಗುವುದಲ್ಲ. ಅಧ್ಯಯನದ ಅವಧಿಯಲ್ಲಿ ಪಡೆದ ಾನವೆಂದೂ ವ್ಯರ್ಥವಾಗಲಾರದು. ಬಲಾಢ್ಯನಾದವನು ಸೋಲನ್ನು ಒಪ್ಪಿಕೊಳ್ಳದೆ ಗೆಲ್ಲುವುದಕ್ಕಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ರೈತನು ತನ್ನ ಹೊಲದಲ್ಲಿ ಕಷ್ಟಪಟ್ಟು ದುಡಿದು ಉತ್ತಮ ಇಳುವರಿಯನ್ನು ಪಡೆಯಲು ಸದಾ ಎಚ್ಚರದಿಂದ ಕೆಲಸಮಾಡುತ್ತಾನೆ.

ಕೊನೆಗೊಮ್ಮೆ ಫಸಲು ಕೈಗೆ ಬರುವ ಹೊತ್ತಿಗೆ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿ ಪೂರ್ತಿ ಬೆಳೆಯು ನಾಶವಾಗುತ್ತದೆ. ವಿಧಿಯು ರೈತನ ಪ್ರಯತ್ನವನ್ನು ನಿಷ್ಫಲಗೊಳಿಸುತ್ತದೆ. ಆ ಣಕ್ಕೆ ರೈತನು ಆಘಾತಕ್ಕೆ ಒಳಗಾಗುವುದು, ಖಿನ್ನನಾಗುವುದು ಸಹಜವಾದರೂ ಆತನು ಆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಬೇಸಾಯವನ್ನು ಮಾಡದೆ ಸುಮ್ಮನುಳಿಯುವುದಿಲ್ಲ. ಇನ್ನಷ್ಟು ಉತ್ಸಾಹದಿಂದ ಕಾಯೋರ್ನ್ಮುಖನಾಗುತ್ತಾನೆ. ದೇಹ ಸೌಖ್ಯವೇ ಮುಖ್ಯವಾಗಿರುವ ಮೃಗಗಳಂತೆ ಮನುಷ್ಯನಲ್ಲ. ಆತನಲ್ಲಿ ವಿವೇಚನಾಶಕ್ತಿ ಇದೆ, ಅಂತ@ಕರಣವಿದೆ. ತನ್ನನ್ನು ತಾನು ಅರಿಯುವ ಶಕ್ತಿ ಇದೆ. ಆತನು ಪೂರ್ವಾರ್ಜಿತ ಕರ್ಮಗಳಿಂದ, ಋಣದ ಎಳೆಗಳಿಂದ ಬಂಧಿತನಾಗಿದ್ದಾನೆ. ಪ್ರಾಕೃತಿಕ ಧರ್ಮವನ್ನೂ ಅವನು ಅನುಸರಿಸಬೇಕು, ದೇಶಧರ್ಮವನ್ನೂ ಪಾಲಿಸಬೇಕು. ಹಾಗಾಗಿಯೇ ಕುಟುಂಬ, ಸಮಾಜವೇ ಮೊದಲಾದ ಸಂಟಿತ ವ್ಯವಸ್ಥೆಗಳೊಳಗೆ ಮನುಷ್ಯನು ಬದುಕಬೇಕಾದುದು ಅನಿವಾರ್ಯ. ದೌರ್ಬಲ್ಯಗಳನ್ನು ಕಳಚಿಕೊಂಡು, ಬಲಯುತನಾಗುವುದಕ್ಕೆ ಲೋಕ ಸಂಸಾರವು ಬೇಕು.

ಅಲ್ಲಿ ಎದುರಾಗುವ ಸೋಲು-ಗೆಲುವು, ನೋವು-ನಲಿವುಗಳು ವ್ಯಕ್ತಿಯನ್ನು ಹದಗೊಳಿಸುತ್ತದೆ. ಜೀವ ನಾನು ಭವದಿಂದ ಪಾಠವನ್ನು ಕಲಿಯುತ್ತಾನೆ. ಹಾಗಾಗಿಯೇ ಮಾಡಲೇ ಬೇಕಾದ ಕರ್ತವ್ಯಗಳನ್ನು, ಒಪ್ಪಿಕೊಂಡ ಕೆಲಸಗಳನ್ನು ನಿರ್ವಂಚನೆಯಿಂದ ಮಾಡುವುದು ಜೀವನಧರ್ಮ. ಆಸ್ತಿಕತೆ ಎಂದರೆ ಕರ್ತವ್ಯ ವಿಮುಖತೆಯಲ್ಲ. ವಿಧಿಯೊಡ್ಡುವ ಸವಾಲು ಗಳನ್ನು ಧೈರ್ಯದಿಂದ ಎದುರಿಸಬೇಕು, ಪ್ರತಿಕೂಲ ಸಂದರ್ಭಗಳಲ್ಲಿ ಸಂಯಮವನ್ನು ಕಳೆದುಕೊಳ್ಳದೆ ನಿಭಾಯಿಸಬೇಕು. ಪ್ರಾಮಾಣಿಕ ಪ್ರಯತ್ನವನ್ನು ಮಾಡಿದಾಗಲೂ ಯಶಸ್ಸು ಸಿದ್ದಿಯಾಗದೇ ಹೋದರೆ ಹತಾಶರಾಗದೆ, ಜೀವನೋತ್ಸಾಹದಿಂದ ಮತ್ತೆ ಪ್ರಯತ್ನಿಸಬೇಕು. ಹೀಗೆ ಜೀವನದ ಏರಿಳಿತಗಳಲ್ಲಿ, ತಿರುವು ತಿರುವುಗಳಲ್ಲಿ ಜೀವಾತ್ಮನು ಸಂಸ್ಕಾರವನ್ನು ಪಡೆಯುತ್ತಾ ಹೋಗಬೇಕು. ಒಳಿತಿನತ್ತಲೇ ಚಿತ್ತವಿದ್ದಾಗ ಜೀವೋತ್ಕರ್ಷವು ಸುರಳಿತವಾಗುತ್ತದೆ.

ತಾಯಿಯು ಜ್ವರ ಪೀಡಿತ ಮಗುವನ್ನು ಮಡಿಲಲ್ಲಿಟ್ಟುಕೊಂಡು ಗುಣಪಡಿಸೆಂದು ದೇವರಲ್ಲಿ ಬೇಡುವುದಷ್ಟೇ ಅಲ್ಲ, ಅಗತ್ಯವಾದ ಔಷದ ಚಿಕಿತ್ಸೆಯನ್ನೂ ಕೊಡಿಸಬೇಕು. ಪ್ರಾರ್ಥನೆ, ಶರಣಾಗತಿಯು ಮನಸ್ಸಿಗೆ ಶಕ್ತಿಯನ್ನು ನೀಡುತ್ತದೆ. ಸಮಚಿತ್ತದಿಂದ ಇರಲು ಸಾಧ್ಯವಾಗುತ್ತದೆ. ಪ್ರಯತ್ನವಿಲ್ಲದ ಪ್ರಾರ್ಥನೆಗೆ ಅರ್ಥವಿಲ್ಲ. ಪ್ರಕೃತಿಯೆಂಬ ಯಂತ್ರದ ಪುಟ್ಟ ಭಾಗವಾಗಿರುವ ಮನುಷ್ಯನ ಜೀವನವು ಪರಮಾತ್ಮನ ರ್ನಿಣಯದಂತೆಯೇ ಸಾಗುತ್ತದೆ. ಯಂತ್ರದ ಭಾಗವಾಗಿರುತ್ತಾ ತನ್ನ ಸ್ಥಿತಿಗೆ ಶೋಕಿಸದೆ, ಬೀಗದೆ ಕರ್ತವ್ಯ ಪ್ರೆಯಿಂದ ಕೆಲಸ ಮಾಡಬೇಕು. ಭರವಸೆಯಿಂದ ಬದುಕುವುದರ ಜೊತೆಜೊತೆಗೆ ಕೆಡುಕಿನಲ್ಲೂ ಒಳಿತನ್ನು ಕಾಣುವ, ಬಿದ್ದುದನ್ನು ಮತ್ತೆ ಎತ್ತಿ ಹಿಡಿಯುವ ಕಾಯೋರ್ತ್ಸಾಹವಿದ್ದರೆ ಸಾರ್ಥಕ ಜೀವನವು ಒಲಿಯುತ್ತದೆ. ಸಮಸ್ಯೆಯಲ್ಲೂ ಸದವಕಾಶವನ್ನರಸುವ ಜಾಣ್ಮೆ ಇದ್ದರೆ ಜಗತ್ತು ಸುಂದರವೆನ್ನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net