ಜೀವನ ಸಂಗಾತಿ ಬೇಡವೆಂದಲ್ಲ.. ನೋ ಎನ್ನಲು ಇರುವುದು ಈ ಕಾರಣ; ನಟಿ ಮನೀಶಾ ಕೋಯಿರಾಲಾ ಹೇಳಿದ್ದೇನು | Manisha Koirala

Untitled design - 2025-01-13T181203.796
Published on

ಮುಂಬೈ: 90ರ ದಶಕದ ಅತ್ಯುತ್ತಮ ನಟಿಯರಲ್ಲಿ ಮನೀಶಾ ಕೊಯಿರಾಲಾ(Manisha Koirala) ಅವರ ಹೆಸರು ಖಂಡಿತವಾಗಿಯೂ ಬರುತ್ತದೆ. 1991ರಲ್ಲಿ ‘ಸೌದಾಗರ’ ಚಿತ್ರದ ಮೂಲಕ ಜನಮನ ಸೆಳೆದಿದ್ದ ನಟಿ ಮನೀಶಾ ಕೊಯಿರಾಲಾ ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಮಿಡಿಯುವಂತೆ ಮಾಡಿದರು.

ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದ ನಟಿ ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿಯವರ ವೆಬ್​​​​ಸರಣಿ ಹೀರಾ ಮಂದಿಯೊಂದಿಗೆ ಬಣ್ಣದ ಜಗತ್ತಿಗೆ ತಮ್ಮ ಪುನರಾಗಮನವನ್ನು ಮಾಡಿದರು. ತನ್ನ ವೈಯಕ್ತಿಕ ಜೀವನದ ಕುರಿತು ಬಹಳ ಕಡಿಮೆ ಮಾತನಾಡುವ ನಟಿ ಮನೀಶಾ ಕೊಯಿರಾಲಾ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಮನೀಶಾ ಕೊಯಿರಾಲಾ ಅವರಿಗೆ ಜೀವನಸಂಗಾತಿ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟಿ, ನನಗೆ ಯಾರೂ ಇಲ್ಲ ಎಂದು ಯಾರು ಹೇಳಿದರು? ನಾನು ಯಾರು ಮತ್ತು ನನಗೆ ಯಾವ ರೀತಿಯ ಜೀವನಬೇಕು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವನದಲ್ಲಿ ಯಾರಾದರೂ ಬಂದರೆ ನಾನು ಅವನಿಗಾಗಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಅಥವಾ ನನ್ನ ಯಾವುದೇ ಗುಣಗಳನ್ನು ಬಿಡಲು ಬಯಸುವುದಿಲ್ಲ. ಯಾರಾದರೂ ನನ್ನ ಜೀವನದಲ್ಲಿ ಬಂದರೆ ಮತ್ತು ನನ್ನೊಂದಿಗೆ ನಡೆಯಲು ಸಾಧ್ಯವಾದರೆ ನಾನು ಸಂತೋಷಪಡುತ್ತೇನೆ. ಆದರೆ ಈಗ ನನ್ನಲ್ಲಿರುವದನ್ನು ಬದಲಾಯಿಸಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಜೀವನದ ವಿಚಾರಕ್ಕೆ ಬಂದರೆ ಬ್ಯಾಲೆನ್ಸ್ ಹುಡುಕುತ್ತಿದ್ದೇನೆ. ಜೀವನದಲ್ಲಿ ಸಂಗಾತಿ ಬರಬೇಕಾದರೆ ಸಿಗುತ್ತಾರೆ. ಆ ಸಮಯದಲ್ಲಿ ನಾವು ಒಬ್ಬರಿಗೊಬ್ಬರು ಹೊಂದಿಕೊಳ್ಳಬೇಕಾಗುತ್ತದೆ. ಆದರೆ ನಾನು ಯಾರನ್ನೂ ಹುಡುಕಲು ಪ್ರಯತ್ನಿಸುವುದಿಲ್ಲ. ಏಕೆಂದರೆ ನನ್ನ ಜೀವನವು ಪೂರ್ಣಗೊಂಡಿದೆ. ನಾನು ಉತ್ತಮ ಜೀವನವನ್ನು ನಡೆಸುತ್ತಿದ್ದೇನೆ ಮತ್ತು ಅದು ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ. ನಾನೀಗ ಏನು ಇಷ್ಟಪಡುತ್ತೇನೆ, ಸ್ವಾತಂತ್ರ್ಯ ಮತ್ತು ತೃಪ್ತಿ, ಭವಿಷ್ಯದಲ್ಲಿಯೂ ಅದನ್ನು ಮುಂದುವರಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ಮನೀಶಾ ಅವರ ಪ್ರೇಮ ಜೀವನದ ಬಗ್ಗೆ ಮಾತನಾಡುವುದಾದರೆ, ಅವರು ನೇಪಾಳಿ ಉದ್ಯಮಿ ಸಾಮ್ರಾಟ್ ದಹಾಲ್ ಅವರನ್ನು 2010 ಜೂನ್ 19ರಂದು ವಿವಾಹವಾದರು. ಈ ಮದುವೆಯು ಕಠ್ಮಂಡುವಿನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ನಡೆಯಿತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇವಲ ಎರಡು ವರ್ಷಗಳಲ್ಲಿ ಇಬ್ಬರೂ ಬೇರೆಯಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net