ಶಾಂತಿ ಸ್ಥಾಪನೆಯಾಗಲಿ: ಜನಾಂಗೀಯ ಹಿಂಸಾಚಾರದಲ್ಲಿ ನಲುಗಿದ ಮಣಿಪುರ

Manipur
Published on

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸೆ ಮರುಕಳಿಸಿದೆ. ಮಣಿಪುರದ ಜಿರಿಬಾಮ್ಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಆತಂಕಕಾರಿ ಸಂಗತಿ ಎಂದರೆ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಕಳೆದ ಕೆಲ ದಿನಗಳಿಂದ ಡ್ರೋನ್​ಗಳನ್ನು ಬಳಸಿ ದಾಳಿಗಳನ್ನು ನಡೆಸಲಾಗುತ್ತಿದೆ. ಸೆ.1 ಮತ್ತು 2ರಂದು ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟು, 12 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಮನೆಯ ಮೇಲೆ ರಾಕೆಟ್ ದಾಳಿ ನಡೆದಿತ್ತು.

ಕಾಲಕಾಲಕ್ಕೆ ಭದ್ರತೆ ಹೆಚ್ಚಿಸಲಾಗಿದ್ದರೂ ಹಿಂಸಾಚಾರದ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ಮೈತೇಯಿ ಹಿಂದುಗಳು ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷಕ್ಕೆ ರಾಜಕೀಯ ಆಯಾಮ ಸಿಕ್ಕಿರುವುದು. ಎರಡೂ ಸಮುದಾಯಗಳ ಸಮಸ್ಯೆ, ಭಿನ್ನಾಭಿಪ್ರಾಯಗಳನ್ನು ಶಾಂತಿಯಿಂದ ಆಲಿಸಿ, ಗೊಂದಲಗಳನ್ನು ದೂರ ಮಾಡಬೇಕಿದೆ. ಆದರೆ, ದುರದೃಷ್ಟಕರವೆಂದರೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪುರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದು, ತಮ್ಮ ರಾಜಕೀಯ ಲಾಭವನ್ನು ನೋಡುತ್ತಿವೆ ಹೊರತು ಜನರ ಮನಸ್ಸುಗಳನ್ನು ಒಂದಾಗಿಸಲು ಯತ್ನಿಸುತ್ತಿಲ್ಲ.

ಮೈತೇಯಿ ಮತ್ತು ಕುಕಿ ಮುಖಂಡರು ಹಿಂಸಾಚಾರಕ್ಕೆ ಭೂಗತ ಉಗ್ರರ ಸಹಕಾರ ಪಡೆಯುತ್ತಿರುವುದು ಕಳವಳ ಹೆಚ್ಚಿಸಿದೆ. 2023ರ ಮೇ ತಿಂಗಳಲ್ಲಿ ಆರಂಭವಾದ ಹಿಂಸಾಚಾರದ ಜ್ವಾಲಾಗ್ನಿಗೆ ಈವರೆಗೆ 230ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗಳನ್ನು ಅನುಭವಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಗಳನ್ನು ಅರಸಿ, ಬೇರೆಡೆ ವಲಸೆ ಹೋಗಿದ್ದಾರೆ. ಹಿಂಸಾಚಾರದ ಪರಿಣಾಮ ರಾಜ್ಯಕ್ಕೆ 800 ಕೋಟಿ ರೂಪಾಯಿಗೂ ಅಧಿಕ ಆದಾಯ ನಷ್ಟವಾಗಿದೆ. ಆದರೂ, ಹಿಂಸೆ ಮತ್ತು ಅಶಾಂತಿ ಎಂದಿಗೂ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಿಲ್ಲ ಎಂಬ ವಾಸ್ತವ ಮಣಿಪುರಿಗಳಿಗೆ ಅರ್ಥವಾಗುತ್ತಿಲ್ಲ. ನಾಗಾ ಹಾಗೂ ಕುಕಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ (ಎಸ್​ಟಿ) ನೀಡಲಾಗಿದೆ. ಈಗ ಮೈತೇಯಿ ಸಮುದಾಯ ಕೂಡ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಬೇಡಿಕೆ ಇಟ್ಟಿರುವುದೇ ಜನಾಂಗೀಯ ಘರ್ಷಣೆಗೆ ಮುಖ್ಯ ಕಾರಣ. ಮೈತೇಯಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನ ದೊರಕಿದರೆ, ಅವರು ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿ ಖರೀದಿಸಬಹುದು. ಇದರಿಂದ ತಮ್ಮ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ ಎಂಬುದು ಕುಕಿ ಸಮುದಾಯದ

ಆತಂಕ. ಈ ಆತಂಕವೇ ಹಿಂಸಾಚರಕ್ಕೆ ತಿರುಗಿದ್ದು, ಶಾಂತಿಸ್ಥಾಪನೆಯ ಪ್ರಯತ್ನಗಳು ಫಲ ನೀಡಿಲ್ಲ. ಎರಡೂ ಸಮುದಾಯಗಳ ಮುಖಂಡರು ದ್ವೇಷವನ್ನು ಬದಿಗಿಟ್ಟು, ಶಾಂತಿಯುತ ಸಂಧಾನಕ್ಕೆ ಮುಂದಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

ಮಣಿಪುರದಲ್ಲಿ ಶಾಂತಿ ನೆಲೆಸುವಂತಾಗಲು, ಮಾತುಕತೆಯೊಂದೇ ಈಗಿರುವ ದಾರಿ. ರಾಜಕೀಯ ಪಕ್ಷಗಳು ಇಲ್ಲಿ ಹೆಚ್ಚು ಜವಾಬ್ದಾರಿ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು. ಎರಡೂ ಸಮುದಾಯದ ಮುಖಂಡರ ಜತೆ ಮಾತುಕತೆ ನಡೆಸುವುದರ ಮೂಲಕ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಮಸ್ಯೆಗೆ ರ್ತಾಕ ಅಂತ್ಯ ಒದಗಿಸಬೇಕು. ಮಣಿಪುರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಜಂಟಿಯಾಗಿ ಪ್ರಯತ್ನ ನಡೆಸಬೇಕು ಮತ್ತು ಪ್ರತಿಪಕ್ಷಗಳು ಶಾಂತಿ ಸ್ಥಾಪನೆಯ ಪ್ರಯತ್ನ ಮತ್ತು ಕ್ರಮಗಳನ್ನು ಬೆಂಬಲಿಸಿದಾಗ ಮಾತ್ರ ಮಣಿಪುರ ಹಿಂಸಾಚಾರದಿಂದ ಮುಕ್ತಿ ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net