

ಕೋಲಾರ: ಮ್ಯಾನ್ಹೋಲ್ನಿಂದ ಒಳಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಉಂಟಾಗಿದ್ದ ಸಮಸ್ಯೆಯನ್ನು ಗಮನಿಸಿದ ನಗರ ಸಂಚಾರಿ ಪೇದೆಗಳಿಬ್ಬರು ಸ್ವಂತ ಖರ್ಚಿನಿಂದ ಮೆಕ್ಕೆ ವೃತ್ತದ ಮ್ಯಾನ್ಹೋಲ್ ಮುಚ್ಚಿಸಿ ಹಾಗೂ ಪಕ್ಕದಲ್ಲಿದ್ದ ಗುಂಡಿಗಳಿಗೆ ಕಲ್ಲು, ಮಣ್ಣು ಹಾಕಿ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೇದೆಗಳಾದ ರಫೀಕ್ ಹಾಗೂ ಗಿರೀಶ್ ಬುಧವಾರ ಈ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮ್ಯಾನ್ಹೋಲ್ಗಳನ್ನು ಸಮರ್ಪಕವಾಗಿ ಮುಚ್ಚದೆ ಒಳಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗಿ ಜನ ಹಿಡಿಶಾಪ ಹಾಕುತ್ತಿದ್ದರು. ಮೆಕ್ಕೆ ವೃತ್ತದಿಂದ ಕೂಗಳತೆ ದೂರದಲ್ಲಿನ ನಗರಸಭೆ ಅಧಿಕಾರಿಗಳು ಮುಖ್ಯ ರಸ್ತೆಯಲ್ಲಿನ ಈ ಅವ್ಯವಸ್ಥೆಗೆ ಜಾಣ ಕುರುಡರಾಗಿದ್ದರು.
ಪರಿಸರ ಇಲಾಖೆಯ ಅಧಿಕಾರಿಗಳು ಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳದೆ ರ್ನಿಲಸಿದ್ದರು. ಇದರಿಂದ ಬೇಸತ್ತ ಪೇದೆಗಳು ಟ್ರಾಕ್ಟರ್ ಲೋಡ್ ಮಣ್ಣು ತರಿಸಿ ಮ್ಯಾನ್ಹೋಲ್ ಮುಚ್ಚುವ ಜತೆಗೆ ಗುಂಡಿಗಳಿಗೆ ಮಣ್ಣು ಹಾಕುವ ಮೂಲಕ ಸ್ವಚ್ಛತೆ ಕಾಳಜಿ ತೋರಿ ನಗರಸಭೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಇದೇ ರಸ್ತೆಯಲ್ಲಿ ತಾಲೂಕು ಆಡಳಿತ ಕಚೇರಿ, ಜಿಲ್ಲಾಧಿಕಾರಿ ನಿವಾಸ ಹಾಗೂ ಜಿಪಂ ಸಿಇಒ ಮನೆಗಳಿದ್ದು ಉನ್ನತ ಅಧಿಕಾರಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಹಲವಾರು ಬಾರಿ ಸಂಚರಿಸುತ್ತಿದ್ದರೂ ಈ ಸಮಸ್ಯೆ ಅವರ ಕಣ್ಣಿಗೆ ಬಿದ್ದಿರಲಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಟ್ಟಾರೆ ಸಂಚಾರಿ ಪೇದೆಗಳ ಸಾಮಾಜಿಕ ಕಳಕಳಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.