

ಕಿರುವಾರ ಎಸ್.ಸುದರ್ಶನ್ ಕೋಲಾರ
ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಮಾವು ಇಳುವರಿ ಕುಸಿತಗೊಂಡಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಳೆದ ವರ್ಷ ಎಂದೂ ಕಂಡಿರದ ಬರ ಪರಿಸ್ಥಿತಿ ಎದುರಾಗಿತ್ತು, ಬಿಸಿಲಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಬಿಸಿಲ ಧಗೆಯಿಂದ ಜನ ರೋಸಿ ಹೋಗಿದ್ದರು. ಬರದ ಛಾಯೆ, ಬೇಸಿಗೆ ಬಿಸಿಲಿನ ಬಿಸಿ ಮಾವು ಸಲಿಗೂ ತಟ್ಟ್ಟಿದ್ದು ಬೆಳೆಗಾರರನ್ನು ಕಂಗೆಡಿಸಿದೆ.
ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದ್ದು, ಆ ಪೈಕಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ತಾಲೂಕಿನ ಬಹುತೇಕ ರೈತರು ಮಾವು ಬೆಳೆಯನ್ನೇ ನಂಬಿ ಬದುಕು ಸಾಗಿಸುತ್ತಾರೆ. ಆದರೆ ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದಿಂದ 39,331.27 ಹೆಕ್ಟೇರ್ ಪ್ರದೇಶದಲ್ಲಿ ಶೇ.70-80 ಮಾವು ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ನಡಿ 88.49 ಕೋಟಿ ರೂ. ಪರಿಹಾರ ಕೋರಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಅವರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಪತ್ರ ಬರೆದಿದ್ದಾರೆ.
ಕೋಟ್…
ಜಿಲ್ಲೆಯಲ್ಲಿ ಈ ವರ್ಷ ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಮಾವು ಇಳುವರಿ ಕುಂಠಿತಗೊಂಡಿದೆ. ಬೆಳೆ ಹಾನಿಯಾಗಿರುವ ಬಗ್ಗೆ ವರದಿ ತಯಾರಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ಬೆಳೆಗಾರರ ಬ್ಯಾಂಕ್ ಖಾತೆ ಜಮೆಯಾಗುತ್ತದೆ.- ಎಸ್.ಆರ್.ಕುಮಾರಸ್ವಾಮಿ
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ.
ತಾಲೂಕುವಾರು ಬೆಳೆ ನಷ್ಟ
ತಾಲೂಕು ನಷ್ಟ (ಹೆಕ್ಟೇರ್) ಪರಿಹಾರ (ಲಕ್ಷ ರೂ.ಗಳಲ್ಲಿ)
ಶ್ರೀನಿವಾಸಪುರ 22,993.45 5,173.53
ಮುಳಬಾಗಿಲು 7,285.50 1,639.24
ಕೋಲಾರ 5,670.18 1,275.79
ಮಾಲೂರು 1,561.16 351.28
ಬಂಗಾರಪೇಟೆ 307.03 69.08
ಕೆಜಿಎಫ್ 1,513.85 340.62
ಒಟ್ಟು 39,331.27 8,849.54