

ಬೆಂಗಳೂರು: ಮುಕ್ತ ಮಾರುಕಟ್ಟೆಯಲ್ಲಿ ಮಾವು ಬೆಲೆಗೆ ಚೈತನ್ಯ ತುಂಬುವ ಉದ್ದೇಶಿತ ಕೇಂದ್ರ-ರಾಜ್ಯ ಸರ್ಕಾರದ ನೆರವಿನಡಿ ಮಾವು ಖರೀದಿ ಪ್ರಕ್ರಿಯೆ ಗುರುವಾರದಿಂದಲೇ ಶುರುವಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಕಟಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕೋರಿಕೆಗೆ ಕೇಂದ್ರ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ಇದೇ ಮೊದಲ ಬಾರಿಗೆ ಬೆಲೆ ಕೊರತೆ ಭರ್ತಿ ಯೋಜನೆಯಡಿ ಮಾವು ಖರೀದಿಯಾಗುತ್ತಿದ್ದು, ಬೆಲೆ ಕುಸಿತದಿಂದ ಕಂಗೆಟ್ಟ ರೈತರಿಗೆ ಉಭಯ ಸರ್ಕಾರಗಳು ನೆರವಾಗುತ್ತಿವೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ), ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಖರೀದಿಗೆ ವ್ಯವಸ್ಥೆಯಾಗಿದೆ. ಗುರುವಾರ ಸ್ವಲ್ಪ ವ್ಯತ್ಯಾಸವಾದರೂ ಪೂರ್ಣ ಪ್ರಮಾಣದ ಪ್ರಕ್ರಿಯೆ ಶುಕ್ರವಾರದಿಂದ ಪ್ರಾರಂಭವಾಗುವುದು ಖಚಿತವೆಂದರು.
ಪ್ರತಿ ಎಕರೆಗೆ 20 ಕ್ವಿಂಟಾಲ್‌ನಂತೆ ಗರಿಷ್ಠ 100 ಕ್ವಿಂಟಾಲ್ ಪ್ರತಿ ರೈತರಿಂದ ಖರೀದಿಗೆ ಆದೇಶ ಹೊರಡಿಸಲಾಗಿದೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯು ಮುಂದಿನ ಒಂದು ತಿಂಗಳ ಕಾಲ ಜಾರಿಯಲ್ಲಿರಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ತೋತಾಪುರಿ ಮಾವಿನ ತಳಿಗೆ ಮಾರುಕಟ್ಟೆಯಲ್ಲಿ 500 ರಿಂದ 600 ರೂ.ಗಳಿಗೆ ಮಾರಾಟ ಲೆಕ್ಕಾಚಾರದಂತೆ ಕ್ವಿಂಟಾಲ್‌ಗೆ ಗರಿಷ್ಠ 1,616 ರೂ.ಗಳನ್ನು ನಿಗದಿಪಡಿಸಲಾಗಿದೆ.
ಮಾರುಕಟ್ಟೆ ಮಧ್ಯಪ್ರವೇಶ ಹಾಗೂ ಪ್ರಚಲಿತ ಮಾರುಕಟ್ಟೆ ಧಾರಣೆಯು ಶೇ.25ರ ಮಿತಿಗೆ ಒಳಪಟ್ಟಿರುತ್ತದೆ. ಈ ನಿಯಮದ ಪ್ರಕಾರ ಪ್ರತಿ ಕ್ವಿಂಟಾಲ್‌ಗೆ 1,212 ರೂ. ಮೂಲ ಬೆಲೆಯಾಗುತ್ತದೆ. ಹೆಚ್ಚುವರಿಯಾಗಿ 404 ರೂ. ಸೇರಿಸಿದೆ. ಅಂದರೆ 1212 ರಿಂದ 1,616ರವರೆಗಿನ ವ್ಯತ್ಯಾಸದ ಮೊತ್ತ ಮಾತ್ರ ಯೋಜನೆಯಡಿ ರೈತರಿಗೆ ಪಾವತಿಸಲಾಗುತ್ತದೆ.
ಕೇಂದ್ರ ರಾಜ್ಯ ಸರ್ಕಾರಗಳು ಪ್ರತಿ ಕೆಜಿಗೆ ತಲಾ ಎರಡು ರೂ. ವ್ಯತ್ಯಾಸ ಪಾವತಿ ಮಾರುಕಟ್ಟೆ ದರದಲ್ಲಿ ಚೈತನ್ಯ ಮೂಡಿಸಲಾಗುತ್ತದೆ. ಗರಿಷ್ಠ 100 ಕ್ವಿಂಟಾಲ್ ಖರೀದಿಸಿದರೆ ಆ ರೈತನಿಗೆ 40 ಸಾವಿರ ರೂ. ನೆರವು ಉಭಯ ಸರ್ಕಾರಗಳಿಂದ ದೊರೆಯುತ್ತದೆ.
ಕೇಂದ್ರ ಸರ್ಕಾರ 2.50 ಲಕ್ಷ ಟನ್ ಖರೀದಿಸಲು ಒಪ್ಪಿಗೆ ನೀಡಿದೆ. ದರ ವ್ಯತ್ಯಾಸ ಪಾವತಿಸಲು 101 ಕೋಟಿ ರೂಗಳಾಗಲಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ತಲಾ ಅರ್ಧ ವೆಚ್ಚ ಭರಿಸಲಿವೆ ಎಂದು ಚಲುವರಾಯಸ್ವಾಮಿ ವಿವರಿಸಿದರು.
ಮುಕ್ತ ಮಾರುಕಟ್ಟೆಯಲ್ಲಿ ಮಾವು ತೋತಾಪುರ ತಳಿಗೆ ಸ್ಪರ್ಧಾತ್ಮಕ ದರ ದೊರೆಯಲೆಂಬ ಉದ್ದೇಶಕ್ಕೆ ಕೇಂದ್ರದ ನೆರವಿನೊಂದಿಗೆ ರಾಜ್ಯ ಸರ್ಕಾರ ಮಾರುಕಟ್ಟೆಗೆ ಮಧ್ಯ ಪ್ರವೇಶಿಸುತ್ತಿದೆ. ಬೆಲೆಗಳಲ್ಲಿ ನಿರೀಕ್ಷೆ ಪ್ರಕಾರ ಹೆಚ್ಚಳ ಕಾಣದಿದ್ದರೆ ಮತ್ತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದರು.
ತಿಂಗಳ ಕಾಲಮಿತಿ, 2.50 ಲಕ್ಷ ಟನ್ ಖರೀದಿ ಪ್ರಕ್ರಿಯೆ ವೇಳೆಗೆ ಬೆಲೆಗಳು ಸುಧಾರಣೆಯಾಗುತ್ತವೆ ಎಂಬ ನಿರೀಕ್ಷೆಯಿದೆ. ಪ್ರಸಕ್ತ ಋತುವಿನಲ್ಲಿ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಈ ಬಾರಿ 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ.
ಆಂಧ್ರಪ್ರದೇಶದ ಚಿತ್ತಾಪುರ ಜಿಲ್ಲೆಗೆ ಮಾವು ಸಾಗಣೆ ನಿರ್ಬಂಧ ವಿಧಿಸಿದ ಕಾರಣ ಬೆಲೆ ಕುಸಿತವಾಗಿದೆ. ಐದಾರು ವರ್ಷಗಳ ಹಿಂದೆ ಬೆಲೆ ಇಳಿದಾಗ ಪ್ರತಿ ಕೆಜಿಗೆ 2.50 ರೂ.ನಂತೆ 10 ಕೋಟಿ ರೂ.ಗಳನ್ನು ತೋಟಗಾರಿಕೆ ಮೂಲಕ ಭರಿಸಲಾಗಿತ್ತು.
ಆದರೆ ಮಾವು ಬೆಳೆದ ರೈತರ ಸಂಕಷ್ಟಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಸ್ಪಂದಿಸಿ ಇದೇ ಮೊದಲ ಬಾರಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅನುಷ್ಠಾನಕ್ಕೆ ತಂದಿವೆ. ಈ ಆದೇಶ ಹೊರಡಿಸಿದ ನಂತರ ಪ್ರತಿ ಕೆಜಿಗೆ ನಾಲ್ಕು ರೂ.ನಂತೆ ಬೆಲೆ ವ್ಯತ್ಯಾಸದ ಮೊತ್ತ ಸಿಗಲಿದ್ದು, ಈಗಾಗಲೇ ಮಾರಾಟ ಮಾಡಿದ ರೈತರಿಗೆ ಅನ್ವಯಿಸುವುದಿಲ್ಲ ಎಂದು ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.