ಇಡೀ ಸಿನಿಮಾದಲ್ಲಿ ಸಂಚಿತ್ ಸಂಜೀವ್ ಪ್ರಮುಖ ಆಕರ್ಷಣೆ. ಆ್ಯಂಗ್ರಿ ಯಂಗ್ ಮ್ಯಾನ್ ಲುಕ್‌ನಲ್ಲಿ ಕಾಣಿಸಿಕೊಂಡು ನಟನೆಯಲ್ಲಿ ಪ್ರೌಢಿಮೆ ಸಾಧಿಸಿದ್ದಾರೆ. ಸುದೀಪ್ ಗಾಂಭೀರ್ಯ, ಹಾವಭಾವ, ಮ್ಯಾನರಿಸಂ ಸಂಚಿತ್‌ನಲ್ಲಿ ಕಾಣಬಹುದು. ಮೊನಚಾದ ಧ್ವನಿಯಲ್ಲಿ ಸಂಚಿತ್ ಹೇಳುವ ಡೈಲಾಗ್‌ಗಳು ಚಪ್ಪಾಳೆಗಿಟ್ಟಿಸಿಕೊಳ್ಳುತ್ತವೆ. ಯುವ ನಿರ್ದೇಶಕ ವಿವೇಕ, ಮೈಸೂರಿನ ಹಿನ್ನೆಲೆಯ 2002ರ ಕಥೆಯನ್ನು ಸೊಗಸಾಗಿ, ವೇಗವಾಗಿ ನಿರೂಪಿಸಿದ್ದಾರೆ. ಮುಂದೇನು? ಎಂಬ ಕುತೂಹಲ ಇಲ್ಲದಿದ್ದರೂ, ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ಕೆಲವು ಪಾತ್ರಗಳಿಗೆ ಇನ್ನಷ್ಟು ವಿವರಣೆ ಬೇಕಿತ್ತು ಅನಿಸುತ್ತದೆ. ಕೇವಲ 95 ನಿಮಿಷದ ಈ ಚಿತ್ರದಲ್ಲಿ ಹಲವು ಪಾತ್ರಗಳಿದ್ದು, ಎಲ್ಲರಿಗೂ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಕ್ಲೈಮ್ಯಾಕ್ಸ್‌ನಲ್ಲಿ ಅಚ್ಚರಿ ಇಟ್ಟಿದ್ದು, ವಿಶೇಷ ಪಾತ್ರವನ್ನು ಪರಿಚಯಿಸುವ ಮೂಲಕ ಸೀಕ್ವೆಲ್ ಸುಳಿವು ನೀಡಿದ್ದಾರೆ. ಸಂಚಿತ್ ಜತೆಗೆ ಕಾಜಲ್ ಕುಂದರ್, ಮಯೂರ್ ಪಟೇಲ್, ಜೈ ಗೋಪಿನಾಥ್ ಗಮನ ಸೆಳೆಯುತ್ತಾರೆ. ರಂಗಕರ್ಮಿ ಪ್ರಶಾಂತ್ ಹಿರೇಮಠ ಪಾತ್ರಕ್ಕೆ ಇನ್ನಷ್ಟು ಆರ್ಭಟ ಬೇಕಿತ್ತು. ಇಡೀ ಆ್ಯಕ್ಷನ್ ಕಥೆಗೆ ಚರಣ್ ರಾಜ್ ಹಿನ್ನೆಲೆ ಸಂಗೀತ ಜೀವಾಳ. ‘ಹಸ್ರವ್ವ; ಸಾಂಗ್ ನೆನಪಿನಲ್ಲಿ ಉಳಿಯುತ್ತದೆ. 2000ರ ಮೈಸೂರನ್ನು ಶೇಖರ್ ಚಂದ್ರ ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಮಾವಿನ ಸೀಸನ್ ಮುಗಿಯುವಷ್ಟರಲ್ಲಿ ಮಾವು ಪ್ರಿಯರಿಗೆ ‘ಮ್ಯಾಂಗೋ ಹೊಸ ತಳಿ’ಯನ್ನು ‘ಮ್ಯಾಂಗೋ ಪಚ್ಚ’ ಮೂಲಕ ಬಿಗ್‌ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.