ಅಕಾಲಿಕ ಮಳೆಯಿಂದ ಮಾವು ಫಸಲಿಗೆ ಹೊಡೆತ; ಆತಂಕದಲ್ಲಿ ಬೆಳೆಗಾರ; ಔಷಧ ಸಿಂಪಡಿಸಲು ಹೆಚ್ಚಿನ ಹೊರೆ

ಹೂವು ಮರಗಳಲ್ಲಿ ಕಾಣಿಸಿಕೊಂಡಿರುವ ಮಾವಿನ ಮರ
ಹೂವು ಮರಗಳಲ್ಲಿ ಕಾಣಿಸಿಕೊಂಡಿರುವ ಮಾವಿನ ಮರ
Published on

ಕೋಲಾರ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮಾವಿಗೆ ಹೂವು ಬಿಡುವ ಮೊದಲೇ ಅಕಾಲಿಕ ಮಳೆಯ ಪರಿಣಾಮದಿಂದಾಗಿ ಫಸಲಿನಲ್ಲಿ ಭಾರಿ ಹೊಡೆತ ಬೀಳುವ ಸಾಧ್ಯತೆ ಇದ್ದು, ರೈತರು ಆತಂಕಕ್ಕೀಡಾಗಿದ್ದಾರೆ.


ಮಾವಿನ ಮರಗಳಲ್ಲಿ ಡಿಸೆಂಬರ್​ ಮತ್ತು ಜನವರಿಯಲ್ಲಿ ಹೂವು ಕಾಣಿಸಿಕೊಂಡು ಮೇನಲ್ಲಿ ಸಲು ಮಾರುಕಟ್ಟೆಗೆ ಪ್ರವೇಶ ಮಾಡುತ್ತದೆ. ಡಿಸೆಂಬರ್​ ಮತ್ತು ಜನವರಿಯಲ್ಲಿ ಉಷ್ಣಾಂಶ ಹೆಚ್ಚಾದಂತೆಲ್ಲ ಹೂವು ಹೆಚ್ಚಾಗಿ ಬರಲಾರಂಭಿಸುತ್ತದೆ. ಆದರೆ ಈ ವರ್ಷ ಹೆಚ್ಚು ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಇರುವುದರಿಂದ ಹೂವು ತಡವಾಗಿ ಕಾಣಿಸಿಕೊಳ್ಳುತ್ತಿದೆ. ಮರಗಳಲ್ಲಿ ಈಗಾಗಲೇ ಶೇ.5ರಷ್ಟು ಹೂವು ಕಾಣಿಸಿಕೊಳ್ಳುತ್ತಿದೆ.

ಔಷಧ ಸಿಂಪಡಣೆಯ ಹೊರೆ: ಏಕಕಾಲದಲ್ಲಿ ಹೂವು ಬರಲು ಹಾಗೂ ಉಷ್ಣಾಂಶ ಹೆಚ್ಚು ಮಾಡಲು ಮಾವಿನ ಮರಗಳಿಗೆ ಡಿಸೆಂಬರ್​ನಲ್ಲಿ ಔಷಧ ಸಿಂಪಡಿಸುತ್ತಾರೆ. ಈ ವರ್ಷದಲ್ಲಿ ಡಿಸೆಂಬರ್​ನಿಂದ ಮಾವಿನ ಮರಗಳಿಗೆ ಔಷಧ ಸಿಂಪಡಣೆ ಕಾರ್ಯವನ್ನು ರೈತರು ಮುಂದುವರಿಸಿದ್ದಾರೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರ ಅಕಾಲಿಕ ಮಳೆ ಸುರಿದಿದ್ದು ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಔಷಧ ಸಿಂಪಡಣೆ ಮಾಡಿರುವುದು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಮಳೆ ನಿಂತ ಬಳಿಕ ಮತ್ತೆ ಔಷಧ ಸಿಂಪಡಣೆ ಮಾಡಬೇಕಿದ್ದು ಇದರಿಂದ ರೈತರಿಗೆ ಹೆಚ್ಚಿನ ಹೊರೆ ಬೀಳಲಿದೆ.

ರೋಗದ ಭೀತಿ: ಹೂವು ಸಂಪೂರ್ಣ ಮರಗಳಲ್ಲಿ ಕಾಣಿಸಿಕೊಂಡ ಹಾಗೂ ಪಿಂದೆ ಕಟ್ಟುವ ತನಕ ಮತ್ತು ಕಾಯಿ ಕೀಳುವ ತನಕ 3-4 ಬಾರಿ ಔಷಧ ಸಿಂಪಡಿಸಬೇಕಾಗುತ್ತದೆ. ಇದಕ್ಕೆ ಸಾವಿರಾರು ರೂಪಾಯಿ ರ್ಖಚಾಗುತ್ತದೆ. ಮಧ್ಯೆ ಮಧ್ಯೆ ಅಕಾಲಿಕ ಮಳೆಯಿಂದಾಗಿ ಮಾವಿನ ಮರಕ್ಕೆ ಹೆಚ್ಚಾಗಿ ರೋಗಗಳು ಕಾಣಿಸಿಕೊಳ್ಳುತ್ತವೆ. ಮತ್ತೆ್ತೆ ಔಷಧ ಸಿಂಪಡಣೆಗೆ ಮುಂದಾಗಬೇಕಾಗುತ್ತದೆ ಎಂಬುದು ರೈತರು ಆತಂಕ.

ಹೂವು ಪ್ರಾರಂಭದಲ್ಲಿಯೇ ಮಳೆ ಸುರಿದಿದೆ. ಮಳೆಯು ಹೀಗೆ ವಾರಗಳ ಕಾಲ ಮುಂದುವರಿದರೆ ಈ ವರ್ಷದ ಮಾವು ಫಸಲಿನ ಮೇಲೆ ಭಾರಿ ಹೊಡೆತ ಬೀಳಲಿದೆ. ಮಳೆಯಿಂದ ಉಷ್ಣಾಂಶ ಕಡಿಮೆಯಾಗಿ ಹೂವು ಬರದೆ ವಿಳಂಬವಾಗುತ್ತದೆ. ಅವಧಿ ಮುಗಿದ ಬಳಿಕ ಬರುವ ಹೂವಿನಿಂದ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಕಳೆದ ವರ್ಷವೂ ಇದೇ ರೀತಿ ಹವಾಮಾನ ವೈಪರೀತ್ಯದಿಂದ ಫಸಲು ಕಡಿಮೆಯಾಯಿತು. ಈ ಬಾರಿಯಾದರೂ ಉತ್ತಮ ಫಸಲು ಬರುತ್ತದೆ ಎಂಬ ನಿರೀೆಯಲ್ಲಿರುವಾಗಲೇ ಅಕಾಲಿಕ ಮಳೆ ರೈತರ ಬಾಳನ್ನು ಹಾಳು ಮಾಡಲು ಪ್ರಾರಂಭಿಸಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಚಿನ್ನಪ್ಪರೆಡ್ಡಿ
ಚಿನ್ನಪ್ಪರೆಡ್ಡಿ

ಮಾವು ಬಿಡುವ ಆರಂಭದಲ್ಲಿ ಅಕಾಲಿಕ ಮಳೆ ರೈತರ ಬದುಕು ಹಾಳು ಮಾಡುತ್ತಿದೆ. ಇದರಿಂದಾಗಿ ಮರಗಳಲ್ಲಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರೈತರು ಹೂವು ತರಿಸಲು ಔಷಧ ಸಿಂಪಡಿಸಿದ್ದು ಮಳೆಯಿಂದಾಗಿ ಎಲ್ಲವೂ ನಷ್ಟವಾಗಿದೆ. ಮತ್ತೆ ಔಷಧ ಸಿಂಪಡಿಸಬೇಕಾದ ಆವಶ್ಯಕತೆಯಿದೆ. ತೋಟಗಾರಿಕೆ ಇಲಾಖೆ ರೈತರಿಗೆ ರಿಯಾಯಿತಿ ದರದಲ್ಲಿ ಔಷಧ ಒದಗಿಸಿದರೆ ಉತ್ತಮ.

ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂದ ಅಧ್ಯಕ್ಷ


ಸತತವಾಗಿ ವಾರಗಳ ಕಾಲ ಮಳೆ ಹೀಗೆ ಮುಂದುವರಿದರೆ ಮಾವಿನ ಹೂವಿಗೆ ತೊಂದರೆಯಾಗುತ್ತದೆ. ಡಿಸೆಂಬರ್​ ಮತ್ತು ಜನವರಿಯಲ್ಲಿ ಹೆಚ್ಚು ಉಷ್ಣಾಂಶ ಇದ್ದಷ್ಟು ಹೂವು ಹೆಚ್ಚಾಗಿ ಬರುತ್ತದೆ. ಮಳೆ ಮತ್ತು ಶೀತಗಾಳಿ ಹೆಚ್ಚಾದರೆ ಮರಗಳಲ್ಲಿ ಮೊಗ್ಗು ಕಾಣಿಸಿಕೊಳ್ಳುವುದಿಲ್ಲ, ಮಳೆ ನಿಂತರೆ ಔಷಧ ಸಿಂಪಡಿಸಬೇಕು.

ಎಂ.ಶ್ರೀನಿವಾಸ್​, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net