ಮಾವು, ಸ್ಟ್ರಾಬೆರಿ ಲಸ್ಸಿ ಲೋಕಾರ್ಪಣೆ

klr komul
ಕೋಮುಲ್​ ವತಿಯಿಂದ ತಯಾರಿಸಿರುವ ಮಾವಿನ ಲಸ್ಸಿ ಹಾಗೂ ಸ್ಟ್ರಾಬೆರಿ ಲಸ್ಸಿಗಳನ್ನು ನಗರದ ಕೋಲಾರದ ಪೊಲೀಸ್​ ಭವನದ ಬಳಿಯ ನಂದಿನಿ ಪಾರ್ಲರ್​ನಲ್ಲಿ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಲೋಕಾರ್ಪಣೆಗೊಳಿಸಿದರು.
Published on

ಕೋಲಾರ: ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯಕರವಾದ ತಂಪುಪಾನೀಯಗಳನ್ನು ಕೋಮುಲ್​ನಿಂದ ತಯಾರಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಒಕ್ಕೂಟದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್​ಪಿಎಸ್​ ಹೇಳಿದರು.

ಕೋಮುಲ್​ ವತಿಯಿಂದ ತಯಾರಿಸಿರುವ ವಿನೂತನ ಉತ್ಪನ್ನಗಳಾದ ಮಾವಿನ ಲಸ್ಸಿ ಹಾಗೂ ಸ್ಟ್ರಾಬೆರಿ ಲಸ್ಸಿಗಳನ್ನು ನಗರದ ಕೋಲಾರದ ಪೊಲೀಸ್​ ಭವನದ ಬಳಿಯ ನಂದಿನಿ ಪಾರ್ಲರ್​ನಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬೇಸಿಗೆ ಆರಂಭವಾಗಿದ್ದು, ಬಿಸಿಲು ಜೋರಾಗಿದೆ. ಗ್ರಾಹಕರು ಈ ಉತ್ಪನ್ನಗಳ ಬಳಕೆಗೆ ಮುಂದಾಗಬೇಕು. ನೈಸರ್ಗಿಕ ಮಾವು, ಸ್ಟ್ರಾಬೆರಿಯನ್ನು ಬಳಸಿಕೊಂಡು ತಯಾರಿಸಲಾಗಿದೆ. ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು, ಶಕ್ತಿ ಬರುತ್ತದೆ, ಜೀರ್ಣಶಕ್ತಿಯೂ ಹೆಚ್ಚುತ್ತದೆ. ಹೀಗಾಗಿ ಇವುಗಳ ಉಪಯೋಗ ಪಡೆದುಕೊಂಡು ಸಂಸ್ಥೆಯ ಅಭಿವೃದ್ಧಿಗೂ ಕೈಜೋಡಿಸಬೇಕೆಂದು ಕೋರಿದರು.

ಎರಡು ಲಸ್ಸಿಗಳಲ್ಲಿ ಅವುಗಳಲ್ಲಿ ಫ್ರೋ ಬಯೋಟಿಕ್​ ಇರುವುದರಿಂದ ಆರೋಗ್ಯಕ್ಕೆ ಉತ್ತಮವಾದ ಪಾನೀಯಗಳಾಗಿವೆ. ಅತಿಸಾರ ಕಾಯಿಲೆಗಳ ಸಂದರ್ಭದಲ್ಲಿ ನಿಶಕ್ತರಾಗುವವರಿಗೆ ಸಾಕಷ್ಟು ಅನುಕೂಲವಾಗುತ್ತವೆ. ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ನಾಶವಾದಾಗ ಈ ಉತ್ಪನ್ನವು ದೇಹಕ್ಕೆ ಶಕ್ತಿಯುತ ಅಂಶಗಳನ್ನು ನೀಡುತ್ತದೆ ಎಂದರು.

ಲಸ್ಸಿ ಬೆಲೆ 15 ರೂ. ಗಳಿದ್ದು, ಕೋಲಾರದಲ್ಲೇ ಮೊದಲ ಬಾರಿಗೆ ಉತ್ಪಾದಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ವಿಸ್ತರಿಸಲಾಗುವುದು. ಹಾಲಿನಿಂದ ಮೊಸರು ಮಾಡಿ ಲಸ್ಸಿ ಮಾಡಲಾಗಿದೆ ಹೊರತು ಹಾಲಿನ ಪುಡಿಯನ್ನು ಈ ಉತ್ಪನ್ನಕ್ಕೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾಲಿನ ಬೆಲೆ ಏರಿಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಸುದ್ದಿಗೋಷ್ಠಿ ನಡೆಸಿ ಹಾಲು ಖರೀದಿ ದರ 2 ರೂ. ಹೆಚ್ಚಳ ಮಾಡಿದ್ದರ ಬಗ್ಗೆ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಸರ್ಕಾರವು ಗ್ರಾಹಕರು ಖರೀದಿ ಮಾಡುವ ಹಾಲಿನ ದರ ಟೀಟರ್​ ಮೇಲೆ 4 ರೂ. ಏರಿಕೆ ಮಾಡಿದೆ. ಇದರಲ್ಲಿ 4 ರೂ. ರೈತರಿಗೆ ನೇರವಾಗಿ ನೀಡಲಾಗುತ್ತಿದೆ. ನಾವು ಬೇಸಿಗೆ ಹಿನ್ನೆಲೆಯಲ್ಲಿ 2 ರೂ. ಹೆಚ್ಚಿಸಿದ್ದೆವು. ಸರ್ಕಾರದ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ಮುಂದಿನ ಮಳೆಗಾಲದಲ್ಲಿ ಹಾಲು ಉತ್ಪಾದನೆ ಹೆಚ್ಚುತ್ತದೆ. ಇದೀಗ ಪ್ರತಿದಿನ 6.5ಲಕ್ಷ ಲೀಟರ್​ ಹಾಲು ಉತ್ಪಾದನೆಯಾಗುತ್ತಿದ್ದು, ಅದನ್ನು 7 ಲಕ್ಷಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಕೋಮುಲ್​ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದೇವೆ. ಚುನಾವಣಾಧಿಕಾರಿಯನ್ನು ನೇಮಕ ಮಾಡಿದರೆ ಎಲ್ಲ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ತಿಳಿಸಿದರು.

* 70 ಹೊಸ ಸಂಘ ಸ್ಥಾಪಿಸುವ ಗುರಿ

ಬೇಸಿಗೆ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದ್ದು, ರೈತರ ಜೀವನೋಪಾಯಕ್ಕೆ ತೊಂದರೆ ಆಗಬಾರದು ಹಾಗೂ ಖಾಸಗಿ ಡೇರಿಗಳ ಕಡೆ ರೈತರು ಮುಖ ಮಾಡಬಾರದು ಎನ್ನುವ ಉದ್ದೇಶ ಒಕ್ಕೂಟ ಹೊಂದಿದ್ದು, ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಅಲ್ಲದೆ ಎಂಪಿಸಿಎಸ್​ಗಳ ಹೆಚ್ಚಳಕ್ಕೆ ಮುಂದಾಗಿ, 36 ಸಂಘಗಳನ್ನು ಕೇವಲ 2 ತಿಂಗಳಲ್ಲೇ ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ 70 ಸಂಘಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಡಾ.ಮೈತ್ರಿ ಹೇಳಿದರು.

* 45 ಕೋಟಿ ರೂ ಲಾಭದಾಯಕ

ಕೋಮುಲ್​ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್​.ಗೋಪಾಲಮೂರ್ತಿ ಮಾತನಾಡಿ, ಹಾಲಿನ ಪುಡಿ ದಾಸ್ತಾನು ಹೆಚ್ಚುವರಿಯಿಲ್ಲ. ಎಲ್ಲವೂ ಮಾರಾಟವಾಗಿದೆ. ಈಗ 800 ಟನ್​ ಇದ್ದು, ಅದನ್ನು ನಾವೇ ಬಳಸಿಕೊಳ್ಳುತ್ತೇವೆ. ಹಾಲು, ಉತ್ಪನ್ನಗಳು ಸಂಪೂರ್ಣವಾಗಿ ಮಾರಾಟವಾಗುತ್ತಿವೆ. 30-&40 ಸಾವಿರ ಲೀಟರ್​ ಹಾಲನ್ನು ಬೇರೆ ಒಕ್ಕೂಟಗಳಿಂದ ಖರೀದಿ ಮಾಡುತ್ತಿದ್ದೇವೆ. ಎಲ್ಲ ಒಕ್ಕೂಟಗಳಿಗಿಂತಲೂ ಹೆಚ್ಚಿನ ಮಾರುಕಟ್ಟೆ ವ್ಯವಸ್ಥೆ ಕೋಲಾರ ಒಕ್ಕೂಟಕ್ಕೆ ಇದ್ದು, 4-5 ಕೋಟಿ ರೂ. ಲಾಭದಾಯಕದಲ್ಲೇ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net