ಲಂಚ ಪ್ರಕರಣ ಮುಚ್ಚಿಹಾಕಿದ ಮಂಗಳೂರು ವಿಶ್ವವಿದ್ಯಾಲಯ? ಪ್ರಾಧ್ಯಾಪಕನ ಮೇಲಿನ ಆರೋಪ ಸಾಬೀತಾಗಿದ್ದರೂ ಕ್ರಮ ತೆಗೆದುಕೊಳ್ಳದ ಮಂಡಳಿ

MNG VV
Published on

ಶ್ರವಣ್ ಕುಮಾರ್ ನಾಳ
ಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ. ಎಂ. ಜಯಶಂಕರ್ ಲಂಚ ಪ್ರಕರಣವನ್ನು ವಿವಿಯ, ಉನ್ನತ ಮಟ್ಟದ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಶೈಕ್ಷಣಿಕ ಮಂಡಳಿ ನಿರ್ದೇಶನದಂತೆ ಮುಚ್ಚಿಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು ವಿವಿ ಕುಲಪತಿ ಹುದ್ದೆ ಕೊಡಿಸುವ ಆಮಿಷದಲ್ಲಿ ವಿವೇಕ್, ಗೋಪಾಲಕೃಷ್ಣ, ಭರತ್, ಮಂಜು ಮತ್ತು ಪ್ರಸಾದ್ ಎಂಬುವರು ತಮಗೆ ಮೋಸ ಮಾಡಿದ್ದಾಗಿ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗ ಪ್ರಾಧ್ಯಾಪಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಜಯಶಂಕರ್ 2021ರ ಮಾ.27ರಂದು ಕಂಕನಾಡಿ ಟೌನ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳಿಗೆ 16 ಲಕ್ಷ ರೂ. ನಗದು, 1.5 ಲಕ್ಷ ರೂ. ಚೆಕ್ ಹಾಗೂ ವಿಜಯ ಬ್ಯಾಂಕ್​ನ ಮೂರು ಖಾಲಿ ಚೆಕ್ ನೀಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಆರೋಪಿಗಳು ಕುಲಪತಿ ಹುದ್ದೆ ಕೊಡಿಸಲು ವಿಫಲರಾಗಿ, ವಂಚನೆ ಎಸಗಿದ್ದಾರೆಂಬುದು ದೂರಿನ ಸಾರವಾಗಿತ್ತು.

ಗೋ ಶಾಲೆಗೆ ದಾನ ನೀಡಿದ್ದು: ಕಂಕನಾಡಿ ಟೌನ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ವಿವಿ ಆಡಳಿತ ಮಂಡಳಿ ಡಾ.ಎಂ.ಜಯಶಂಕರ್ ವಿರುದ್ಧ ತನಿಖೆ ನಡೆಸಿದೆ. ಜಯಶಂಕರ್ ತಾನು ರಾಯಚೂರು ವಿವಿ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿಲ್ಲ, ಬದಲಾಗಿ ಗೋ ಶಾಲೆಗೆ ದಾನ ನೀಡಿದ್ದೆ ಎಂದು ಮೌಖಿಕವಾಗಿ ಹೇಳಿಕೆ ನೀಡಿದ್ದರಿಂದ ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದು ವಿವಿ ಸಿಂಡಿಕೇಟ್ ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಲಂಚ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿವಿ, ಜಯಶಂಕರ್​ಗೆ ನೋಟಿಸ್ ನೀಡಿತ್ತು. ಜಯಶಂಕರ್ ಉತ್ತರ ನೀಡಿದ್ದರೂ, ಸಮರ್ಪಕವಾಗಿಲ್ಲ ಎಂದು ಸಿಂಡಿಕೇಟ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

ತನಿಖೆ: 2021ರ ಏ.9ರ ಸಭೆಯಲ್ಲಿ ಇಲಾಖಾ ಆಂತರಿಕ ವಿಚಾರಣೆ ನಡೆಸಲು ನಿರ್ಣಯಿಸಿ, 6 ತಿಂಗಳು ಪ್ರಾಧ್ಯಾಪಕ ಜಯಶಂಕರ್ ಅವರನ್ನು ಹುದ್ದೆಯಿಂದ ಅಮಾನತಿನಲ್ಲಿ ಇರಿಸುವಂತೆ ವಿವಿ ಸಿಂಡಿಕೇಟ್ ಸೂಚಿಸಿತ್ತು. 2022ರ ಜೂ.1ರಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಬೈಲೂರು ಶಂಕರ ರಾಮ ಸಮಿತಿ ತನಿಖಾ ವರದಿ ಸಲ್ಲಿಸಿದೆ. ಕುಲಪತಿ ಹುದ್ದೆ ಪಡೆಯಲು ಹಣ ನೀಡಿರುವುದು ಗಂಭೀರ ವಿಚಾರ. ಜತೆಗೆ ಆರೋಪವೂ ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಿಳಿವಳಿಕೆ ಪತ್ರ ನೀಡಿ ಪ್ರಕರಣ ಮುಕ್ತಾಯ

2021ರ ಏ.9ರ ಸಿಂಡಿಕೇಟ್ ಸಭೆ ಡಾ.ಎಂ. ಜಯಶಂಕರ್ ಅವರನ್ನು ಅಮಾನತಿನಲ್ಲಿರಿಸುವಂತೆ ಸೂಚಿಸಿದ್ದರೂ, ವಿವಿ ಉನ್ನತ ಮಟ್ಟದ ಅಧಿಕಾರಿಗಳ ಒತ್ತಡಕ್ಕೆ ಮಣಿದು ತನಿಖಾ ವರದಿ ಲಭಿಸುವ ಮೊದಲೇ, 2021ರ ಸೆ.13ರ ಸಿಂಡಿಕೇಟ್ ಸಭೆಯಲ್ಲಿ ಅಮಾನತು ಅದೇಶ ಹಿಂಪಡೆದುಕೊಳ್ಳಲಾಯಿತು. ಯಾವುದೇ ಆಡಳಿತಾತ್ಮಕ ಜವಾಬ್ದಾರಿ ನೀಡದಂತೆ ಷರತ್ತಿನೂಂದಿಗೆ ಕೊಡಗಿನ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಮೂರು ತಿಂಗಳ ಬಳಿಕ 2022ರ ಜೂನ್1 ರಂದು ಲಂಚ ಪ್ರಕರಣದ ತನಿಖಾ ವರದಿ ಸೆ.15ರ ಸಿಂಡಿಕೇಟ್ ಸಭೆಯಲ್ಲಿ ಮಂಡನೆಯಾಗಿ ‘ವಿಚಾರಣಾ ವರದಿ ಪರಿಶೀಲಿಸಿ, ಸದರಿಯವರಿಗೆ ತಿಳಿವಳಿಕೆ ಪತ್ರ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದೆಂದು’ ನಿರ್ಧರಿಸಲಾಯಿತು. ಗಂಭೀರ ಪ್ರಕರಣವೊಂದರ ತನಿಖಾ ವರದಿ ಬಗ್ಗೆ ಕೇವಲ ಮೂರು ನಿಮಿಷ ಚರ್ಚೆ ನಡೆದಿರುವುದು ವಿವಿ ಇತಿಹಾಸದಲ್ಲೇ ಮೊದಲು.

ಆರೋಪದ ಬಗ್ಗೆ ವಿವಿ ಪ್ರಾಧ್ಯಾಪಕ ಡಾ. ಜಯಶಂಕರ್​ಗೆ ವಿವಿಯಿಂದ ನೋಟಿಸ್ ನೀಡಲಾಗಿತ್ತು. ನಂತರ ಆಂತರಿಕ ವಿಚಾರಣೆ ನಡೆಸಿ, ತನಿಖಾ ವರದಿಯನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ತನಿಖೆ ನಡೆಸಲು ಎಸಿಬಿಗೂ ಕೋರಲಾಗಿತ್ತು. ಆದರೆ, ಈ ಪ್ರಕರಣ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ತನಿಖೆ ನಡೆಸಲು ಒಪ್ಪಲಿಲ್ಲ.

| ಪ್ರೊ. ಪಿ.ಎಸ್. ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net