

ಮಂಗಳೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಶಿಕ್ಷಣ, ಹಾಸ್ಟೆಲ್, ವಿದ್ಯಾರ್ಥಿ ವೇತನ ಸಹಿತ ವಿವಿಧ ಯೋಜನೆ ಜಾರಿಗೆ ಬಜೆಟ್‌ನಲ್ಲಿ ಶೇ.24ರಷ್ಟು ಅನುದಾನ ಮೀಸಲಿಟ್ಟಿದೆ. ಸಾಮಾಜಿಕ ನ್ಯಾಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಪಿವಿಎಸ್ ವೃತ್ತದ ಬಳಿ ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಿದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ ಕಟ್ಟಡ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟರಿಗೆ ಅಭಿವೃದ್ಧಿ ಕಾಮಗಾರಿಗಳಲ್ಲಿ 50 ಲಕ್ಷ ರೂ.ವರೆಗೆ ಗುತ್ತಿಗೆ ನೀಡಬೇಕು ಎಂಬ ಐತಿಹಾಸಿಕ ನಿರ್ಧಾರವನ್ನು 2013ರಲ್ಲಿ ಸಿದ್ದರಾಮಯ್ಯ ಕೈಗೊಂಡಿದ್ದರು. ಅದನ್ನು ಇದೀಗ ಒಂದು ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು
ಪರಿಶಿಷ್ಟ ಜಾತಿ, ಪಂಗಡದವರಿಗೆ ಉತ್ತಮ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಾಣ ಮಹತ್ವದ್ದು. ಮಹಾತ್ಮ ಗಾಂಧೀಜಿ ಅವರಿಗಿಂತ ಮೊದಲೇ ಕುದ್ಮುಲ್ ರಂಗರಾಯರು ಸ್ವಾತಂತ್ರ್ಯ ಹೋರಾಟದ ಜತೆ ಸಾಮಾಜಿಕ ಹೋರಾಟ ಮಾಡಿ, ಅದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ಸಮಾಜದ ವಿರೋಧವನ್ನೂ ಎದುರಿಸಿದವರು. ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ, ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಸ್ಥಳದಾನ ಮಾಡಿರುವ ನಗರ ಮಧ್ಯದ ಜಾಗದಲ್ಲಿ ಶಿಥಿಲವಾಗಿದ್ದ ಹಾಸ್ಟೆಲ್ ಕಟ್ಟಡವನ್ನು 10 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಮೂರು ಕೋಟಿ ರೂ. ವೆಚ್ಚದಲ್ಲಿ ಕುದ್ಮುಲ್ ರಂಗ ರಾಯರ ಸಮಾಧಿ ಅಭಿವೃದ್ಧಿ ಮಾಡಲಾಗುತ್ತಿದೆ. ಕ್ಷೇತ್ರದ 23 ಪರಿಶಿಷ್ಟರ ಕಾಲೊನಿಗಳಿಗೆ ಸೌಲಭ್ಯ ಕಲ್ಪಿಸಿ, ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶ ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ ಎ.ಸಿ.ವಿನಯಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್ ಕೆ., ಗುತ್ತಿಗೆದಾರ ಸುಜಯ ಶೆಟ್ಟಿ ಉಪಸ್ಥಿತರಿದ್ದರು.
ಕುದ್ಮುಲ್ ರಂಗರಾವ್ ಅವರ ಬಗ್ಗೆ ದಲಿತ ಮುಖಂಡ ಎಂ.ದೇವದಾಸ್ ಉಪನ್ಯಾಸ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕುದ್ಮಲ್ ರಂಗ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಬಿ. ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಸುರೇಶ್ ಅಡಿಗ ವಂದಿಸಿದರು.