

ಮಂಡ್ಯ; ನಮ್ಮ ಮನೆಯ ಬಾಲ್ಕನಿಗಳಲ್ಲಿ ಗೂಡುಕಟ್ಟುವ ಸಾಕು ಪಾರಿವಾಳಗಳನ್ನು ನಾವು ನೋಡಿರುತ್ತೇವೆ. ಇದರ ಜೊತೆಗೆ ಕೆಲವರು ತನ್ನ ಮನೆಗಳಲ್ಲಿ ತಾವೇ ಗೂಡು ನಿರ್ಮಿಸಿ ಪಾರಿವಾಳಗಳನ್ನು ಸಾಕುತ್ತಾರೆ. ಇನ್ನೂ ಸಾಕು ಪಾರಿವಾಳಗಳ ಹಾರಾಟದ ಅವಧಿ ಮತ್ತು ಚಮತ್ಕಾರಿಕ ಕೌಶಲ್ಯಗಳು ಜನರನ್ನು ತನ್ನತ್ತ ಆಕರ್ಷಿಸುತ್ತದೆ.
ಕೆಲವರು ರೇಸ್ ಕ್ರೇಜ್ಗಾಗಿ ಪಾರಿವಾಳವನ್ನು ಸಾಕುತ್ತಾರೆ. ರೇಸ್ಗಾಗಿಯೇ ಸಾಕಷ್ಟು ಹಣ ಖರ್ಚು ಮಾಡಿ ಪಾರಿವಾಳವನ್ನು ಖರೀದಿ ಮಾಡಲಾಗುತ್ತದೆ. ಅಂದಹಾಗೆ ಈ ರೀತಿಯ ರೇಸ್‌ನಲ್ಲಿ ಭಾಗಿಯಾಗಿದ್ದ ಪಾರಿವಾಳ 52 ದಿನ, 1790 ಕಿ.ಮೀ ಚಲಿಸಿ ತನ್ನ ಮಾಲೀಕನನ್ನ ಹುಡುಕಿಕೊಂಡು ಬಂದು ದಾಖಲೆ ನಿರ್ಮಾಣ ಮಾಡಿದೆ. ತನ್ನ ಮಾಲೀಕನನ್ನ ಹುಡುಕಿ ದೆಹಲಿಯಿಂದ ಮಂಡ್ಯಕ್ಕೆ ಹಾರಿ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಎಂಬ ಪಾರಿವಾಳ ವಿಶೇಷ ದಾಖಲೆಯನ್ನು ನಿರ್ಮಿಸಿದೆ.
(ಏಜೆನ್ಸೀಸ್)
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ಅವರು ದೆಹಲಿಯಲ್ಲಿ ಪಾರಿವಾಳಗಳ ರೇಸ್‌ನ್ನು ಆಯೋಜಿಸಿದ್ದರು. ಇದರಲ್ಲಿ ಮಂಡ್ಯದ ವಿ.ಸಿ ಫಾರಂನ ಶ್ರೀಧರ್ ಅವರಿಗೆ ಸೇರಿದ ಅಭಿಮನ್ಯು ಹೆಸರಿನ ಪಾರಿವಾಳವೊಂದು ಭಾಗಿಯಾಗಿತ್ತು. ಈ ರೇಸ್‌ನಲ್ಲಿ ಸತತ 52 ದಿನಗಳ ಹಾರಾಟ ನಡೆಸಿದ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ ಬಂದಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಅಭಿಮನ್ಯು ಪಾರಿವಾಳ ಸಾಧನೆಯನ್ನು ಮಾಡಿದೆ. ಮೊದಲ ರೇಸ್‌ನಲ್ಲಿ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರೇಸ್‌ನಲ್ಲಿ ಪಾಲ್ಗೊಂಡಿದ್ದ ಒಟ್ಟು 22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗೆ ವಾಪಸ್ಸಾಗಿವೆ. ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಮಂಡ್ಯದ ಅಭಿಮನ್ಯು ದಾಖಲೆ ಬರೆದಿದೆ.