

ಬೆಂಗಳೂರು: ನಗರದ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬುಧವಾರ ಟ್ಯೂಷನ್ಗೆ ಹೋಗುತ್ತಿದ್ದ 13 ವರ್ಷದ ಬಾಲಕನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ, ಹೆಡೆಮುರಿ ಕಟ್ಟಿದ್ದಾರೆ. ಈ ಪ್ರಕರಣದಲ್ಲಿ ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರು ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದರು. ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಆಗ ಹುಳಿಮಾವು ಠಾಣೆಯ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದರು ಎನ್ನಲಾಗಿದೆ. ಆರೋಪಿಗಳು ಮೃತ ಬಾಲಕ ನಿಶ್ಚಿತ್ ತಂದೆಗೆ ಪರಿಚಯವಿದ್ದ ವ್ಯಕ್ತಿಗಳೇ ಎಂದು ಶಂಕಿಸಲಾಗಿದೆ.
ಕ್ರೈಸ್ಟ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ನಿಶ್ಚಿತ್, ಬುಧವಾರ ಸಂಜೆ ಅರಕೆರೆಯ ಶಾಂತಿನಿಕೇತನ ಲೇಔಟ್ನಲ್ಲಿ ಟ್ಯೂಷನ್ ತರಗತಿಗಳಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪಹರಿಸಲ್ಪಟ್ಟಿದ್ದ. ಹೆಸರಾಂತ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಆತನ ತಂದೆ, ಬಾಲಕ ನಿಗದಿತ ಸಮಯಕ್ಕೆ ಮನೆಗೆ ಬಾರದ ಕಾರಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
(ಏಜೆನ್ಸೀಸ್)
ಗುರುವಾರ ಸಂಜೆ, ನಿಶ್ಚಿತ್ ಅವರ ಮೃತದೇಹ ಕಗ್ಗಲಿಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಅವರ ಮೃತದೇಹ ತೀವ್ರವಾಗಿ ಸುಟ್ಟುಹೋಗಿರುವುದಾಗಿ ಕಂಡುಬಂದಿದೆ.
ಬಾಲಕನ ಹುಡುಕಾಟ ನಡೆಸಿದಾಗ ಅರಕೆರೆ ಫ್ಯಾಮಿಲಿ ಪಾರ್ಕ್ ಬಳಿ ಆತನ ಸೈಕಲ್ ಪತ್ತೆಯಾಗಿತ್ತು. ಬಾಲಕನ ಬಿಡುಗಡೆಗಾಗಿ 5 ಲಕ್ಷ ರೂಪಾಯಿ ನೀಡುವಂತೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಮತ್ತು ಅಪಹರಣ ಪ್ರಕರಣ ದಾಖಲಿಸಲಾಗಿತ್ತು.