ಧಾರಾಕಾರ ಮಳೆಗೆ ತತ್ತರಿಸಿದ ಮಂಡ್ಯ: ಉಕ್ಕಿ ಹರಿಯುತ್ತಿವೆ ಕೆರೆ-ಕಟ್ಟೆಗಳು, ರಸ್ತೆಗಳು ಜಲಾವೃತ, ಜನರ ಬದುಕು ಮೂರಾಬಟ್ಟೆ

mandya rain 3
Published on

ಮಂಡ್ಯ: ಜಿಲ್ಲೆಯಾದ್ಯಂತ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಲ್ಲಲ್ಲಿ ಕಿಲೋ ಮೀಟರ್​ ದೂರದವರೆಗೂ ನೀರು ನಿಂತಿದ್ದು, ಕೆರೆಯಂತಾಗಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಕೆರೆ-ಕಟ್ಟೆಗಳು ತುಂಬಿ ಜಮೀನುಗಳಿಗೆ ನೀರು ನುಗ್ಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ತೊಣ್ಣೂರು ಕೆರೆ ಕೋಡಿ ಬಿದಿದ್ದು, ಅಪಾರ ಪ್ರಮಾಣದ ನೀರು ಹೊರ ಬಂದು ಗ್ರಾಮಕ್ಕೆ ನುಗ್ಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಜಲಾವೃತಗೊಂಡಿದೆ. ನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಮಂಡ್ಯ ಗ್ರಾಮಾಂತರ ಹಳೆ ಬೂದನೂರು ಬಳಿ ಕೆರೆ ಒಡೆದು ಬೆಂಗಳೂರು-ಮೈಸೂರು ಮುಖ್ಯರಸ್ತೆಗೆ ನೀರು ನುಗ್ಗಿದೆ. ರಸ್ತೆ ಜಲಾವೃತಗೊಂಡ ಹಿನ್ನೆಲೆ ವಾಹನಗಳಿಗೆ ಶ್ರೀರಂಗಪಟ್ಟಣ - ಪಾಂಡವಪುರ ಮಾರ್ಗವಾಗಿ ಬೆಂಗಳೂರಿಗೆ ತೆರಳಲು ಬದಲಿ ವ್ಯವಸ್ಥೆ ಮಾಡಲಾಗಿದೆ.

ಮಂಡ್ಯದ ಕಾರಸವಾಡಿ ಕೆರೆ ಭರ್ತಿಯಾಗಿ ಕೋಡಿ ಒಡೆದಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹನಿಯಂಬಾಡಿ, ಹೆಬ್ಬಾಳ ಮಾರ್ಗದ ತೊರೆಗಳು ಭೋರ್ಗರೆದು ಹರಿಯುತ್ತಿವೆ. ತೊರೆ ಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆ ನಾಶವಾಗಿದೆ. ವಿದ್ಯುತ್ ಕಂಬಗಳು ಬಿದ್ದಿವೆ.

ಧಾರಾಕಾರ ಮಳೆಯಿಂದಾಗಿ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ರಾತ್ರಿಯಿಡೀ ಜನರು ಆತಂಕದಲ್ಲೇ ಕಾಲ ಕಳೆದಿದ್ದಾರೆ. ಮನೆಯಲ್ಲಿದ್ದ ದಿನೋಪಯೋಗಿ ವಸ್ತು, ದಿನಸಿ, ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರ ಸೇರಿದಂತೆ ಎಲ್ಲ ವಸ್ತುಗಳೂ ಹಾನಿಯಾಗಿವೆ.

ಮಳವಳ್ಳಿ-ಮೈಸೂರು ರಸ್ತೆಯೂ ಜಲಾವೃತಗೊಂಡಿದೆ. ಪಕ್ಕದ ಕೆರೆಯ ಕೋಡಿ ಒಡೆದ ಕಾರಣ ರಸ್ತೆಗೆ ನೀರು ನುಗ್ಗಿದೆ. ಮಳವಳ್ಳಿ ತಾಲೂಕಿನ ಆಲದಹಳ್ಳಿಯಲ್ಲಿ ಕೆರೆ ಏರಿ ಒಡೆದಿದ್ದು, ಗದ್ದೆಗಳಿಗೆ ನೀರು ನುಗ್ಗಿ ರೈತರಿಗೆ ಅಪಾರ ಪ್ರಮಾಣ ಹಾನಿ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net