

ಮಂಡ್ಯ: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿ, ಬಳಿಕ ಪಾರಾಗಲು ಸುಳ್ಳು ಕತೆ ಕಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ವಿದ್ಯಾನಗರ ಬಡಾವಣೆಯ ಎರಡನೇ ಕ್ರಾಸ್ನಲ್ಲಿ ಸೋಮವಾರ ಕೊಲೆಯೊಂದಾಗಿತ್ತು. ರಾಜಸ್ಥಾನ ಮೂಲದ ಬುಂಡಾರಾಮ್ ಹತ್ಯೆಯಾದ ವ್ಯಕ್ತಿ. ಇದಾದ ಬಳಿಕ ಆತನ ಪತ್ನಿ ಪೊಲೀಸರಿಗೆ ನೀಡಿದ್ದ ಮಾಹಿತಿಯಲ್ಲಿ, ದರೋಡೆಕೋರರು ನನ್ನ ಪತಿಯ ಹತ್ಯೆ ಮಾಡಿದ್ದಾರೆ. ನನ್ನ ಹಾಗೂ ಮಕ್ಕಳ ಕೈಕಾಲು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು.
ಆದರೆ ಈ ಕೊಲೆಯಲ್ಲಿ ಭಾಗಿಯಾಗಿದ್ದ ರಾಜಸ್ಥಾನದ ಮನೀಶ್ ಮತ್ತು ಕಿಶನ್ ಚೆನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಸಿಕ್ಕ ಬೆನ್ನಲ್ಲೇ ಎಲ್ಲ ಬಸ್ ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಹಾಗೇ ಚೆನ್ನರಾಯಪಟ್ಟಣದ ಬಸ್ಸ್ಟ್ಯಾಂಡ್ನಲ್ಲಿ ಮನೀಶ್ ಮತ್ತು ಕಿಶನ್ ಬಿಟ್ಟು ಹೋಗಿದ್ದ ಬ್ಯಾಗ್ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ, ಗನ್ ಸೇರಿ ಕೆಲವು ಮಾರಕಾಸ್ತ್ರಗಳು ದೊರೆತಿದ್ದವು.
ಬ್ಯಾಗ್ನ್ನು ವಾಪಸ್ ಪಡೆಯಲು ಬಂದ ಮನೀಶ್, ಕಿಶನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೂರ್ತಿ ಸತ್ಯ ಹೊರಬಂದಿದೆ. ಪ್ರಿಯಕರನ ಜತೆ ಸೇರಲು ಬುಂಡಾರಾಮ್ ಪತ್ನಿಯೇ ಸುಪಾರಿ ಕೊಟ್ಟಿದ್ದಾಗಿ ಬಾಯಿಬಿಟ್ಟಿದ್ದಾರೆ. ಸದ್ಯ ಪತ್ನಿ ಚಂದ್ರಿಕಾ, ಪ್ರಿಯಕರ ಸುರೇಶ್, ಸುಫಾರಿ ಕಿಲ್ಲರ್ಸ್ಗಳಾದ ಮನೀಶ್ ಮತ್ತು ಕಿಶನ್ ಪೊಲೀಸರಿಂದ ಬಂಧಿತರಾಗಿದ್ದಾರೆ.