ಜೆಡಿಎಸ್​​ ಪಕ್ಷವನ್ನು ನಾಶ ಮಾಡುತ್ತೀವಿ ಎಂದವರಿಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ :ಎಚ್​.ಡಿ.ಕುಮಾರಸ್ವಾಮಿ

Untitled-design-10-1
Published on

ಮಂಡ್ಯ ಲೋಕಸಭಾ ರಣರಂಗದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್​ ಚಂದ್ರು) ವಿರುದ್ಧ ಕಣಕ್ಕಿಳಿದಿದ್ದ ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್​​.ಡಿ.ಕುಮಾರಸ್ವಾಮಿ ಅವರು ಮತದಾರರಿಗೆ, ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರಿಗೆ ವೈಯಕ್ರಿಕ ಧನ್ಯವಾದಗಳನ್ನು ತಿಳಿಸುತ್ತೇನೆ. ದೇಶದಲ್ಲಿ ಎನ್​ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

ಎಕ್ಸಿಟ್ ಪೋಲ್​​​ನ ಫಲಿತಾಂಶಕ್ಕಿಂತ ಸ್ವಲ್ಪ ಏರುಪೇರಾಗಿದೆ. ನಾವು 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು. ಆದರೆ ಪ್ರಧಾನಿ ಮೋದಿ ಅವರನ್ನು ಅತಿಯಾಗಿ ಅವಲಂಭಿಸಿ, ಸ್ವಲ್ಪ ಓವರ್​ ಕಾನ್ಫಿಡೆನ್ಸ್​​ನಿಂದ ಮೈಮರೆತಿದ್ದೇವು. ಜತೆಗೆ ವಿರೋಧ ಪಕ್ಷಗಳು ಮತ್ತು ಕಾಣದ ಕೈಗಳು ಮಾಡಿರುವ ಅಪಪ್ರಚಾರವು ಸ್ವಲ್ಪ ಸೀಟು ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ‌ಕೇಂದ್ರ, ಚಾಮರಾಜನಗರ, ಹಾಸನದಲ್ಲಿ ಸಮಸ್ಯೆಗಳಿರುವುದು ಮೊದಲೇ ಗೊತ್ತಾಗಿತ್ತು. ಆದರೆ ನನ್ನ ತಪ್ಪಿನಿಂದ 4-5 ಸ್ಥಾನ ಕಳೆದುಕೊಂಡಿದ್ದೇವೆ ಎಂದು ಎಚ್​​ಡಿಕೆ ಹೇಳಿದ್ದಾರೆ.

ಜೆಡಿಎಸ್​​ ಪಕ್ಷವನ್ನು ನಾಶ ಮಾಡುತ್ತೇವೆ ಎಂಬ ಮಾತಿಗೆ ಪ್ರತಿಕ್ರಿಯಿಸಿ ಎಚ್​ಡಿಕೆ, ಕಾಂಗ್ರೆಸ್ ಆಡಳಿತ 20 ಸ್ಥಾನ ಗೆಲ್ಲುತ್ತೇವೆ. ಜೆಡಿಎಸ್ ಅನ್ನು ಸಂಪೂರ್ಣ ನಾಶ ಮಾಡುತ್ತೇವೆ, ಬೆಂಗಳೂರು ಗ್ರಾಮಾಂತರದಲ್ಲಿ ನಮಗೆ ಸೋಲು ಆಗುವುದಿಲ್ಲ ಎಂದಿದ್ದರು. ಅವರ ಮಾತಿಗೆ ಈಗ‌ ಜನ ಉತ್ತರ ಕೊಟ್ಟಿದ್ದಾರೆ. ನಮ್ಮನ್ನ ಜನ ಬೆಂಬಲಸಿದ್ದಾರೆ. ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಗೆದ್ದಿದ್ದೇವೆ. ಬೆಂ.ಗ್ರಾಮಾಂತರ, ಮಂಡ್ಯ, ಕೋಲಾರ ಭಾಗದ ಜನರಿಗೆ ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೀನಿ ಎಂದಿದ್ದಾರೆ.

ಮಧ್ಯಾಹ್ನ 02.42ರ ಟ್ರೆಂಡ್​ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 297ರಲ್ಲಿ ಮತ್ತು ಕಾಂಗ್ರೆಸ್​ 228ರಲ್ಲಿ ಹಾಗೂ ಇತರೆ 18 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್​​ 10 ಮತ್ತು ಜೆಡಿಎಸ್​​ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net