ಪ್ರತಿಷ್ಠೆ ಕಣದಲ್ಲಿ ಎಚ್​ಡಿಕೆಗೆ ಸಿಕ್ಕಿದ್ದು ಮಂಡ್ಯ ಸಕ್ಕರೆ : 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು

Untitled-design-9-2
Published on

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಸುದೀರ್ಘ ರಾಜಕೀಯ ಇತಿಹಾಸವನ್ನು ಹೊಂದಿರುವ ಮಂಡ್ಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರವು, ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್​​ ಮತ್ತು ಜೆಡಿಎಸ್​​ ನಡುವಿನ ಪೈಪೋಟಿಗೆ ಹೆಸರುವಾಸಿಯಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್​​​ ಮೈತ್ರಿಯಿಂದಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಎಚ್​ಡಿಕೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​​ ಸ್ಟಾರ್​ ಚಂದ್ರು ಎಂದೇ ಖ್ಯಾತಿಯಾಗಿರುವ ವೆಂಕಟರಮಣೇಗೌಡ ಅವರನ್ನು ಕಣಕ್ಕಿಳಿಸಿತು. ಮಂಡ್ಯ ಸ್ಪರ್ಧಿಗಳ ಒಳ-ಹೊರಗಿನ ಹೋರಾಟದ ಈ ರಣರಂಗದಲ್ಲಿ ಎಚ್​.ಡಿ.ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಪ್ರಸ್ತುತ ಹಿಂದುಳಿದಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗವು ತನ್ನ ಪೋಸ್ಟ್​ನಲ್ಲಿ ತಿಳಿಸಿದೆ.

ಮಂಡ್ಯ ಲೋಕಸಭೆ ಕ್ಷೇತ್ರವು ಅದರ ಅಡಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಮಳವಳ್ಳಿ (ಎಸ್‌ಸಿ), ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಮತ್ತು ಕೃಷ್ಣರಾಜನಗರ ಕ್ಷೇತ್ರಗಳನ್ನು ಒಳಗೊಂಡಿದೆ.

ಮಧ್ಯಾಹ್ನ 01.56ರ ಟ್ರೆಂಡ್​ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 295ರಲ್ಲಿ ಮತ್ತು ಕಾಂಗ್ರೆಸ್​ 230ರಲ್ಲಿ ಹಾಗೂ ಇತರೆ 18ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್​​ 10 ಮತ್ತು ಜೆಡಿಎಸ್​​ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net