

ಹೈದರಾಬಾದ್: ಲೋಕಸಭೆ ಚುನಾವಣೆ 2024ರ ಫಲಿತಾಂಶದ ಮತ ಎಣಿಕೆ ಪ್ರಗತಿಯಲ್ಲಿದೆ. ತೆಲಂಗಾಣದ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿ ಆರಂಭಿಕ ಪ್ರವೃತ್ತಿಯಲ್ಲಿ ಹಿಂದುಳಿದಿದ್ದು, ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮುನ್ನಡೆಯಲ್ಲಿದ್ದರು. ಆದರೆ ಈಗ ಅಸಾದುದ್ದೀನ್ ಓವೈಸಿ 1,13,683 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಳೆದ ನಾಲ್ಕು ಲೋಕಸಭಾ ಚುನಾವಣೆಗಳಿಂದಲು ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೆ.ಭಗವಂತ್ ರಾವ್ ಅವರನ್ನು 2.82 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. 2014ರಲ್ಲಿ ಓವೈಸಿ 5,13,868 ಮತಗಳನ್ನು ಪಡೆಯುವ ಮೂಲಕ ವಿಜೇತರಾದರು. ಬಿಜೆಪಿ ಅಭ್ಯರ್ಥಿಯನ್ನು 2,02,454 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಹೈದರಾಬಾದ್ ಕ್ಷೇತ್ರವು ಸಾಂಪ್ರದಾಯಿಕವಾಗಿ ಎಐಎಂಐಎಂನ ಭದ್ರಕೋಟೆಯಾಗಿದೆ. ಇದು 1984 ರಿಂದ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಪ್ರಬಲ ಹಿಡಿತವನ್ನು ಉಳಿಸಿಕೊಂಡಿದೆ. ಅಸಾದುದ್ದೀನ್ ಓವೈಸಿ ಅವರಿಗಿಂತ ಮೊದಲು, ಪಕ್ಷದ ಮಾಜಿ ಮುಖ್ಯಸ್ಥ ಮತ್ತು ಅಸಾದುದ್ದೀನ್ ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಅವರು ಸತತ ಆರು ಬಾರಿ ಈ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ಬಿಜೆಪಿಯು ಮೊದಲ ಬಾರಿಗೆ ಹೈದರಾಬಾದ್ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನುಳಿದ ಅಭ್ಯರ್ಥಿಗಳ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಮೊಹಮ್ಮದ್ ವಲಿಯುಲ್ಲಾ ಸಮೀರ್ ಅವರನ್ನು ಕಣಕ್ಕಿಳಿಸಿದರೆ, ಬಿಆರ್‌ಎಸ್ ಗದ್ದಂ ಶ್ರೀನಿವಾಸ್ ಯಾದವ್ ಅವರನ್ನು ಕಣಕ್ಕಿಳಿಸಿದೆ
ಮಧ್ಯಾಹ್ನ 12.51ರ ಟ್ರೆಂಡ್ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 298ರಲ್ಲಿ ಮತ್ತು ಕಾಂಗ್ರೆಸ್ 225ರಲ್ಲಿ ಹಾಗೂ ಇತರೆ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್ 10 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್)