ಸುಮಲತಾ​ರ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರಲು ಸಜ್ಜು, ನ.28ರಂದು ಶಕ್ತಿ ಪ್ರದರ್ಶನ

mandya sacchidananda
Published on

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ರ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಶನಿವಾರ ಇಂಡುವಾಳು ಗ್ರಾಮದ ನಿವಾಸದಲ್ಲಿ ಹಿತೈಷಿಗಳು, ಬೆಂಬಲಿಗರ ಜತೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ಸಚ್ಚಿದಾನಂದ, ನ.28ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ನಿರ್ಧರಿಸಿದರು. ಆ ದಿನ ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿ, ಅವರ ಸಮ್ಮುಖದಲ್ಲೇ ಬಿಜೆಪಿ ಪಕ್ಷದ ಸದಸ್ಯತ್ವ ಪಡೆಯಲಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚ್ಚಿದಾನಂದ, ಸುಮಲತಾರನ್ನು ಬೆಂಬಲಿಸಿದ್ದಕ್ಕೆ ನನ್ನನ್ನು ಕಾಂಗ್ರೆಸ್​ನಿಂದ ಉಚ್ಚಾಟನೆ ಮಾಡಲಾಗಿದೆ. ನನ್ನಂತೆ ಲಕ್ಷಾಂತರ ಕಾರ್ಯಕರ್ತರು ಸುಮಲತಾರನ್ನು ಬೆಂಬಲಿಸಿದ್ದರು. ಆ ವೇಳೆ ನನ್ನನ್ನು ಸೇರಿದಂತೆ ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಚಾಟಿಸಲಾಗಿತ್ತು. ಆದರೆ ನನ್ನೊಬ್ಬನನ್ನು ಬಿಟ್ಟು ಉಳಿದ ಎಲ್ಲರನ್ನೂ ವಾಪಸ್ ಕರೆದುಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ನಾಯಕರ ಪಕ್ಷ, ಬಿಜೆಪಿ ಕಾರ್ಯಕರ್ತರ ಪಕ್ಷ. ಬಿಜೆಪಿ ಸದಸ್ಯತ್ವ ಪಡೆದು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.

ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಬಗ್ಗೆ ಸುಮಲತಾ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡ್ತಾರೆ. ಜನವರಿ ವೇಳೆಗೆ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಭೆ ನಡೆಸುವೆ. ಶ್ರೀರಂಗಪಟ್ಟಣದ ಜನತೆ ವಂಶ ರಾಜಕಾರಣ ತೊರೆದು ಯುವ ನಾಯಕತ್ವ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net