ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ನಿಯಮ ಸಡಿಲ: ಎಚ್.ಕೆ.ಪಾಟೀಲ | Expansion into urban areas

H K Patil
Published on

ಬೆಂಗಳೂರು: ವೈದ್ಯಕೀಯ ವ್ಯಾಸಂಗ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆಯನ್ನು ಇನ್ನು ಮುಂದೆ ನಗರ ಪ್ರದೇಶಗಳಿಗೆ ವಿಸ್ತರಣೆಯಾಗಲಿದ್ದು, ಸುಗ್ರೀವಾಜ್ಞೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ತೀರ್ಮಾನಿಸಿದೆ.

ವೈದ್ಯರ ಗ್ರಾಮೀಣ ಕಡ್ಡಾಯ ಸೇವೆ ಸಡಿಲಗೊಳಿಸಲು ಒಪ್ಪಿಗೆ ನೀಡಿದೆ. ಈ ಸಂಬಂಧ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಅಸ್ತು ಎಂದಿದೆ.

ವಿಧಾನಮಂಡಲದ ಉಭಯ ಸದನಗಳ ಅಧಿವೇಶನವಿಲ್ಲ. ವಿಷಯವು ತುರ್ತಾಗಿರುವುದರಿಂದ ಈ ಮಸೂದೆಯನ್ನು ಅಧ್ಯಾದೇಶವನ್ನಾಗಿ ಹೊರಡಿಸಲು ನಿರ್ಣಯಿಸಿದೆ. ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಈ ಮಾಹಿತಿ ನೀಡಿದರು.

ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಪೂರ್ತಿ ಕೈಬಿಟ್ಟಿಲ್ಲ. ಗ್ರಾಮೀಣ ಪ್ರದೇಶದ ವೈದ್ಯರ ಹುದ್ದೆಗಳಿಗಿಂತ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಸೇವೆ ನಿಯಮವನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗಿದೆ.

ಸರ್ಕಾರಿ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯ ಮೇಲೆ ತುಂಬಲು ಹಾಗೂ ಉಳಿದ ಖಾಲಿ ಹುದ್ದೆಗಳಿಗೆ ಸಂಸ್ಥೆಯ ಕೋಟಾದಡಿಯಲ್ಲಿ ಓದಿದ ವಿದ್ಯಾರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ.

ಮುಚ್ಚಳಿಕೆ ಪತ್ರ ಕಡ್ಡಾಯ

ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನಗರ ಪ್ರದೇಶಗಳಲ್ಲಿನ ಹುದ್ದೆಗಳಿಗೆ ನೇಮಿಸಲು ಅವಕಾಶ ಕಲ್ಪಿಸಲಾಗುತ್ತದೆ.ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಎಂಬಿಬಿಎಸ್, ಸ್ನಾತಕೋತ್ತರ ಪಧವಿದರರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ. ಒಂದು ವರ್ಷದ ಕಡ್ಡಾಯ ಸೇವೆಯನ್ನು ತಪ್ಪದೇ ಮಾಡುವ, ತಪ್ಪಿದಲ್ಲಿ ಅದಕ್ಕೆ ಸಂಬಂಧಪಟ್ಟ ದಂಡ ಪಾವತಿಸುವೆ.

ಜತೆಗೆ ಅದರ ಪರಿಣಾಮಗಳನ್ನು ಎದುರಿಸುವ ಮುಚ್ಚಳಿಕೆ ಪತ್ರ ಬರೆದು ಕೊಟ್ಟ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳನ್ನು ಓದುವುದಕ್ಕೆ ನಿರಕ್ಷೇಪಣಾ ಪತ್ರ ನೀಡಲು ಸಂಪುಟ ಒಪ್ಪಿದೆ ಎಂದು ಎಚ್.ಕೆ.ಪಾಟೀಲ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net