ಅಂತರಂಗ: ಮನವೆಂಬ ಮರ್ಕಟ

Mind
Published on
ಮನಸ್ಸನ್ನು ನಿಗ್ರಹ ಮಾಡು. ಆಗ ಏನನ್ನಾದರೂ ಸಾಧಿಸಬಹುದು ಎಂದು ತಿಳಿದವರು ಹೇಳುತ್ತಾರೆ. ಆದರೆ ಯಾರಾದರೂ ಮನಸ್ಸನ್ನು ನಿಗ್ರಹ ಮಾಡಲು ಪ್ರಯತ್ನಿಸಿದಾಗ, ಅದು ಅಸಾಧ್ಯವೇ ಸರಿ ಎಂದು ಬಹುಬೇಗ ಅವರಿಗೆ ಅನ್ನಿಸುತ್ತದೆ. ಇನ್ನು ಕೆಲವರು ಮನೋ ನಿಗ್ರಹ ಸಾಧ್ಯವೇ ಇಲ್ಲ ಎಂದು ಮನಸ್ಸನ್ನು ಹರಿಯುವುದಕ್ಕೆ ಬಿಟ್ಟುಬಿಡುತ್ತಾರೆ.

ಶಾಸ್ತ್ರ ಗ್ರಂಥಗಳು ಮನಸ್ಸಿನ ಸ್ವಭಾವವನ್ನು ಮಂಗಕ್ಕೆ ಹೋಲಿಸುತ್ತೆವೆ. ಅದು ಮಂಗ ಬೇರೆ, ಮರದಿಂದ ಮರಕ್ಕೆ, ಕೊಂಬೆಯಿಂದ ಕೊಂಬೆಗೆ, ಕ್ಷಣದಿಂದ ಕ್ಷಣಕ್ಕೆ ಹಾರುತ್ತಿರುತ್ತದೆ. ಮಂಗನಿಗೆ ಯಾರೋ ಹೆಂಡವನ್ನು ಕುಡಿಸಿಬಿಟ್ಟರು. ಆಲೋಚಿಸಿ ಆ ಮಂಗದ ಸ್ಥಿತಿ. ಅದರ ಜೊತೆಗೆ ಮಂಗನಿಗೆ ಚೇಳು ಕಚ್ಚಿಬಿಟ್ಟಿದೆ. ಆ ನೋವಿನಿಂದ ಕೋತಿಯು ಎಗರಾಡುತ್ತಿದೆ. ಅಲ್ಲದೆ ಒಂದು ಪ್ರೇತಾತ್ಮವು ಆ ಕೋತಿಯನ್ನು ಸೇರಿಬಿಟ್ಟಿದೆ. ಸ್ವಲ್ಪ ಭಾವಿಸಿ ನೋಡಿ ಆ ಕೋತಿಯ ಪರಿಸ್ಥಿತಿ. ಹೀಗೆ ನಮ್ಮ ಮನಸ್ಸು ಕೂಡ. ಪ್ರತಿ ನಿಮಿಷ, ಕ್ಷಣ, ನಮ್ಮ ಮನಸ್ಸು ಒಂದು ವಿಷಯದಿಂದ, ಒಂದು ವಿಷಯಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಿರುತ್ತದೆ. ಈಗ ನಮ್ಮ ಊರಿನಲ್ಲಿ, ಮುಂದೆ ಯಾವುದೋ ಪಟ್ಟಣದಲ್ಲಿ, ಇನ್ನು ಸ್ವಲ್ಪ ಸಮಯದಲ್ಲೇ ಬೇರೆ ದೇಶಗಳಿಗೆ ಹಾರಿ ಬಿಡುತ್ತದೆ. ಎಷ್ಟೋ ಬಾರಿ ನಮ್ಮ ಮನಸ್ಸು ಎಲ್ಲೆಲ್ಲಿ ಹೋಗುತ್ತಿರುತ್ತದೆ ಎಂದೇ ನಮಗೆ ತಿಳಿಯದು. ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು, ನೂರಾರು ಭಾವನೆಗಳು. ಅವನ್ನು ನಿಗ್ರಹಿಸಲು ಕಷ್ಟಸಾಧ್ಯ ಎನ್ನಿಸಿಬಿಡುತ್ತದೆ. ವಿಮಾನ, ಉಪಗ್ರಹಕ್ಕಿಂತಲೂ ವೇಗವಾಗಿ ನಮ್ಮ ಮನಸ್ಸು ಹೋಗಬಲ್ಲದು.

ಅಂತಹ ಚಂಚಲ ಮನಸ್ಸನ್ನು ಅಭ್ಯಾಸ ಮತ್ತು ವೈರಾಗ್ಯಗಳಿಂದ ನಿಯಂತ್ರಿಸಬಹುದು ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಅಭ್ಯಾಸ ಎಂದರೆ ಒಳ್ಳೆಯ ಆಲೋಚನೆ, ಕೆಲಸಗಳನ್ನು ಮಾಡುವುದು, ವೈರಾಗ್ಯ ಎಂದರೆ ಕೆಟ್ಟ ಆಲೋಚನೆ, ಕೆಲಸಗಳನ್ನು ಮಾಡದಿರುವುದು ಎಂದು. ಈ ರೀತಿಯಾಗಿ ಮನಸ್ಸು ಎಂಬ ಮರ್ಕಟವನ್ನು ನಿಗ್ರಹಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net