

ಪಾಂಡವಪುರ: ಎಲ್ಲೆಂದರಲ್ಲಿ ಮಲ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದು ಇದನ್ನು ತಪ್ಪಿಸುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್‌ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಸೂಚಿಸಿದರು.
ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಅವರು, ಮಲ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಕ್ಕಿಂಗ್ ಯಂತ್ರ ಮರು ಚಾಲನೆ: ಈ ಹಿಂದೆ 13ನೇ ಹಣಕಾಸು ಯೋಜನೆಯಡಿ ಶೌಚಗೃಹದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರ ಖರೀದಿಸಲಾಗಿದ್ದು, ವಾಹನ ಚಾಲಕರು ಮತ್ತು ಸಹಾಯಕರಿಲ್ಲದೆ ಚಾಲನೆಯಲ್ಲಿಲ್ಲ. ಆದ್ದರಿಂದ ಸಕ್ಕಿಂಗ್ ಯಂತ್ರವನ್ನು ಆಸಕ್ತ ಮತ್ತು ಸಶಕ್ತ ಸ್ವಸಹಾಯ ಸಂಘದ ಮೂಲಕ ನಿರ್ವಹಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ದಿಮೆ ಮಾದರಿಯಲ್ಲಿ ಸ್ವಸಹಾಯ ಸಂಘ ಅಥವಾ ಜಿಪಿಎಲ್‌ಎಫ್ ಮೂಲಕ ಕರಾರು ಒಪ್ಪಂದ ಮಾಡಿಕೊಂಡು ಮಲ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಸಕ್ಕಿಂಗ್ ಯಂತ್ರವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತ್ಯಾಜ್ಯ ನಿರ್ವಹಣೆಗಾಗಿ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಒಂದು ಎಕರೆ ಜಮೀನಿಗೆ ಗ್ರಾಪಂ ಲಭ್ಯ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ ಅವರು, ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಒಣ ತ್ಯಾಜ್ಯವನ್ನು ಸಂಗ್ರಹಿಸಿ, ಕೇಂದ್ರೀಕೃತ ಮಾದರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಣೆ ಮಾಡಿ. ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಅಗತ್ಯವಿರುವ ಕ್ರಮಗಳನ್ನು ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತೆಗೆದುಕೊಂಡು ತಗಲುವ ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸೂಚಿಸಿದರು.
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿನ ಸ್ವಚ್ಛ ವಾಹಿನಿಗಳ ವಿಮೆಯನ್ನು ನವೀಕರಣಗೊಳಿಸಬೇಕು. ಸ್ವಚ್ಛ ವಾಹಿನಿಯ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಬೇಕು. ಜಿಪಿಎಲ್‌ಎಫ್‌ಗಳ ಕರಾರು ಒಪ್ಪಂದವನ್ನು ನವೀಕರಣಗೊಳಿಸಬೇಕು. ವಾಹನಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ, ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಪಿಡಿಒ ಪೂರ್ಣಿಮಾ ಇತರರು ಇದ್ದರು.