ಪಾಕ್​ ಸುಂದರಿಗೆ ಮಾರುಹೋಗಿ BSFನ ಅತಿ ಸೂಕ್ಷ್ಮ ಮಾಹಿತಿ ಸೋರಿಕೆ; ಆರೋಪಿ ಅರೆಸ್ಟ್​

gujarat Ats
Published on

ಅಹಮದಾಬಾದ್​: ಗಡಿ ಭದ್ರತಾ ಪಡೆ(BSF)ಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ಪಾಕ್​ ಗೂಢಾಚಾರಿಣಿಯ ಅಂದಕ್ಕೆ ಮಾರುಹೋಗಿ ಆಕೆಯ ಜೊತೆ ದೇಶಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.

ಬಂಧಿತನನ್ನು ನಿಲೇಶ್​ ಬಲಿಯಾ ಎಂದು ಗುರುತಿಸಲಾಗಿದ್ದು, ಈತ ಬಿಎಸ್​ಎಫ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಎಂದು ತಿಳಿದು ಬಂದಿದೆ. ಭುಜ್​ನಲ್ಲಿರುವ ಬಿಎಸ್​ಎಫ್​ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್​ ವಿಭಾಗದಲ್ಲಿ ಈತ ಆಫೀಸ್​ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಟಿಎಸ್​ ವರಿಷ್ಠಾಧಿಕಾರಿ ಸುನೀಲ್​ ಜೋಶಿ ಬಂಧಿತ ಆರೋಪಿ ಬಲಿಯಾನನ್ನು ಪಾಕ್​ ಗೂಢಾಚಾರಿಣಿ ವಾಟ್ಸ್​ಆ್ಯಪ್​ ಮೂಲಕ ಜನವರಿಯಲ್ಲಿ ಸಂಪರ್ಕಿಸಿದ್ದಾಳೆ. ಮೊದಲಿಗೆ ಆಕೆ ತನ್ನನ್ನು ತಾನು ಅದಿತಿ ತಿವಾರಿ ಎಮದು ಪರಿಚಯಿಸಿಕೊಂಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

Woman honeytrap Young Man

ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಇದನ್ನೇ ದುರುಪಯೋಗ ಪಡಿಸಿಕೊಂಡ ಗೂಢಾಚಾರಿಣಿ ಆರೋಪಿ ಕಡೆಯಿಂದ ಕೆಲ ಅತಿಸೂಕ್ಷ್ಮ ಮಾಹಿತಿಗಳನ್ನು ಪಡೆದು ಅದಕ್ಕೆ ಬದಲಾಗಿ ಆನ್​ಲೈನ್​ ಮೂಲಕ ಹಣವನ್ನು ವರ್ಗಾಯಿಸಿದ್ದಾಳೆ. ಬಳಿಕ ಈತನನ್ನು ಹನಿಟ್ರ್ಯಾಪ್​ ಮಾಡಿ ಬಿಎಸ್​ಎಫ್​ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿದ್ದಾಳೆ.

ನಿಲೇಶ್​ ಬಲಿಯಾ ಮೇಲೆ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಈ ಬಗ್ಗೆ ಎಟಿಎಸ್​ಗೆ ತಿಳಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಪಾಕ್​ ಗೂಢಾಚಾರಿಣಿಯೊಂದಿಗೆ ಶಾಮೀಲಾಗಿರುವುದು ಪಕ್ಕಾ ಆಗಿದೆ. ಆರೋಪಿಯನ್ನು ಕರೆದು ವಿಚಾರಣೆ ನಡೆಸಿದಾಗ ಆತ ನಡೆದ ವಿಚಾರಗಳನ್ನೆಲ್ಲಾ ಹೇಳಿದ್ದಾನೆ.

ಬಂಧಿತ ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ(IPC Section) 120-B, 121, 121-A, 123 ಅಡಿ ಪ್ರಕರಣ ದಾಖಲಿಸಲಾಗಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು ಎಟಿಎಸ್​ ವರಿಷ್ಠಾಧಿಕಾರಿ ಸುನೀಲ್​ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net