ನಾಯಿಗೆ ಕಾರು ಡ್ರೈವಿಂಗ್​ ಕಲಿಸಲು ಹೋಗಿ ಅಪಘಾತ ಎಸಗಿ ಜೈಲು ಸೇರಿದ

pitbull
Published on

ಲಾಸ್​ ಏಂಜಲೀಸ್​: ಸಿಯಾಟಲ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಕಾರು ಚಾಲನೆ ಕಲಿಸುವ ಯತ್ನದಲ್ಲಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದರಿಂದ ಇದೀಗ ಜೈಲು ಪಾಲಾಗಿದ್ದಾನೆ.

ಭಾನುವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಾ ತಮ್ಮ ಕಾರುಗಳಿಗೆ ಡಿಕ್ಕಿ ಹೊಡೆದು, ಜಖಂಗೊಳಿಸಿ, ಪರಾರಿಯಾಗಿದ್ದಾಗಿ ಎರಡು ಕಾರುಗಳ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಅಪಘಾತ ಎಸಗಿದ ಕಾರನ್ನು ಬೆನ್ನಟ್ಟಿದ್ದರು. ಹಲವು ಕಿಲೋಮೀಟರ್​ವರೆಗೆ ಸಿನಿಮೀಯ ರೀತಿಯ ಚೇಸ್​ ಮಾಡಿದ ಬಳಿಕ ಕಾರನ್ನು ತಡೆಯುವಲ್ಲಿ ಯಶಸ್ವಿಯಾದರು.

ಕಾರಿನೊಳಗೆ ಇಣುಕಿದಾಗ ಪಿಟ್​ಬುಲ್​ ನಾಯಿಯೊಂದು ಸ್ಟೇರಿಂಗ್​ ಹಿಡಿದಿದ್ದನ್ನು ಕಂಡು ದಂಗಾದರು. ಡ್ರೈವರ್​ ಸೀಟ್​ನಲ್ಲಿ ಸ್ಟೇರಿಂಗ್​ ಹಿಡಿದು ಪಿಟ್​ಬುಲ್​ ನಾಯಿ ಕಾರು ಚಲಾಯಿಸುತ್ತಿದ್ದರೆ, ಅದರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಆಕ್ಸಲೇಟರ್​ ಮತ್ತು ಬ್ರೇಕ್​ ಅನ್ನು ಆಪರೇಟ್​ ಮಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತನ್ನ ಸಾಕುನಾಯಿಗೆ ಕಾರು ಚಾಲನೆ ಕಲಿಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net