ಸಲ್ಮಾನ್ ಖಾನ್​​ಗೆ ಬೆದರಿಕೆ! ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ.. Salman Khan

Salman Khan
Published on

Salman Khan: ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಹಲವು ಸುತ್ತು ಗುಂಡು ಹಾರಿಸಿ ಸುಮಾರು ಒಂದು ವರ್ಷದ ನಂತರ ಮತ್ತೊಮ್ಮೆ ಈಗ ಅವರಿಗೆ ಜೀವ ಬೆದರಿಕೆ ಬಂದಿತ್ತು. ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾದ ಸಂದೇಶದ ಮೂಲಕ ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಅವರನ್ನು ಕೊಲ್ಲುವುದಾಗಿ ಮತ್ತು ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಕುರಿತಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರ ಕೈಗೆ  ಆರೋಪಿ ಸಿಕ್ಕಿ ಬಿದಿದ್ದಾನೆ.

ಆರೋಪಿಯ ಹೆಸರು ಮಾಯಾಂಕ್ ಪಾಂಡ್ಯ. ವಯಸ್ಸು 26 ವರ್ಷಗಳು. ಗುಜರಾತ್‌ನ ವಡೋದರಾ ನಿವಾಸಿ.  ಮುಂಬೈನ ವರ್ಲಿ ಪೊಲೀಸರು ಬಂಧಿಸಿದರು.

ಆರೋಪಿ ಮಾಯಾಂಕ್ ಏಪ್ರಿಲ್ 13 ರಂದು ಬೆಳಿಗ್ಗೆ 6:30 ಕ್ಕೆ ಮುಂಬೈನ ವರ್ಲಿ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಆ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದಾಗ, ಅದು ಗುಜರಾತ್‌ನ ವಡೋದರಾದಲ್ಲಿದೆ ಎಂದು ತಿಳಿದುಬಂದಿದೆ.

"ನಾವು ಸಲ್ಮಾನ್ ಮನೆಗೆ ಹೋಗಿ ಅವನನ್ನು ಕೊಲ್ಲುತ್ತೇವೆ." "ಅಗತ್ಯ ಬಿದ್ದರೆ, ಸಲ್ಮಾನ್ ಖಾನ್ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸುತ್ತೇವೆ" ಎಂದು ಮಯಾಂಕ್ ಬೆದರಿಕೆ ಸಂದೇಶದಲ್ಲಿ ಎಚ್ಚರಿಸಿದ್ದಾನೆ.

ಈ ಸಂದೇಶದಲ್ಲಿ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೆಸರನ್ನು ಸಹ ಉಲ್ಲೇಖಿಸಿದ್ದಾರೆಂದು ತೋರುತ್ತದೆ. ವರ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 351(2) ಮತ್ತು 351(3) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮುಂಬೈ ಉಪ ಪೊಲೀಸ್ ಆಯುಕ್ತ (ವಲಯ 3), ದತ್ತಾತ್ರೆ ಕಂಬಳೆ ಅವರು ತಕ್ಷಣವೇ ಪೊಲೀಸ್ ತಂಡವನ್ನು ವಡೋದರಾಕ್ಕೆ ಕಳುಹಿಸಿದರು. ಅಲ್ಲಿ ಅವರು ಶಂಕಿತ ಮಾಯಾಂಕ್‌ನನ್ನು ಬಂಧಿಸಿದರು. ಆರೋಪಿ ಮಾಯಾಂಕ್ ನನ್ನು ತೀವ್ರವಾಗಿ ಪ್ರಶ್ನಿಸಿದ ನಂತರ ಪೊಲೀಸರು ಬಿಡುಗಡೆ ಮಾಡಿದರು. ಪೊಲೀಸರು ಮಾಯಾಂಕ್ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ ಎಂದು ಗುರುತಿಸಿದ್ದಾರೆ. ಎರಡು ಅಥವಾ ಮೂರು ದಿನಗಳ ನಂತರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮಾಯಾಂಕ್​ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಮಾಯಾಂಕ್ ನಿಜವಾಗಿಯೂ ಹುಚ್ಚನೇ? 

ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಹಲವು ಬಾರಿ ಕೊಲೆ ಬೆದರಿಕೆ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ. ಈ ಬಾರಿ ಸಲ್ಮಾನ್‌ಗೆ ಗುಜರಾತ್‌ನಿಂದ ಬೆದರಿಕೆ ಸಂದೇಶ ಬಂದಿತು. ಇತ್ತೀಚೆಗೆ ಬೆದರಿಕೆ ಸಂದೇಶ ಕಳುಹಿಸಿದ ಮಯಾಂಕ್ ಪಾಂಡ್ಯ ಹುಚ್ಚನಾಗಿದ್ದರೆ, ಅವನ ಫೋನ್ ಮೂಲಕ ಅಚ್ಚುಕಟ್ಟಾಗಿ ಎಚ್ಚರಿಕೆ ಸಂದೇಶ ಬರೆದು ಕಳುಹಿಸಿದವರು ಯಾರು? ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net