ನಿತಿನ್ ಗಡ್ಕರಿಗೆ ಬೆದರಿಕೆ ಕರೆ; ಜೈಲಿನಲ್ಲಿ ತಂತಿ ನುಂಗಿದ ಆರೋಪಿ!

Untitled design - 2023-10-08T113000.849
Published on

ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿದ ಆರೋಪದಡಿ ಬಂಧಿತನಾದ ಆರೋಪಿ ಇದೀಗ ಜೈಲಿನಲ್ಲಿ ಕಬ್ಬಿಣದ ತಂತಿಯನ್ನು ನುಂಗಿದ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಜೈಲಿನೊಳಗೆ ಕಬ್ಬಿಣದ ತಂತಿಯನ್ನು ನುಂಗಿದ್ದು, ಸೂಕ್ತ ಚಿಕಿತ್ಸೆಯಿಂದ ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದರು. ಸೆಂಟ್ರಲ್ ಜೈಲಿನಲ್ಲಿರುವ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಎಂಬ ವ್ಯಕ್ತಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಾರದ ಮೊದಲು ಆರೋಪಿ ತಂತಿಯ ತುಂಡು ಮತ್ತು 50 ಮಾತ್ರೆಗಳನ್ನು ನುಂಗಿರುವುದಾಗಿ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ದಾನೆ. ತದನಂತರದಲ್ಲಿ ಗುರುವಾರ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯದ ಆದೇಶದ ಮೇರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ, ಹೊಟ್ಟೆಯಲ್ಲಿ ತಂತಿಯ ತುಂಡು ಇರುವುದನ್ನು ದೃಢಪಡಿಸಿದ್ದಾರೆ.

ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದ ಹಿನ್ನೆಲೆ ವೈದ್ಯರು ಆತನನ್ನು ಫಿಟ್ ಎಂದು ಪರಿಗಣಿಸಿದ್ದು, ನಂತರ ಅವರನ್ನು ಮತ್ತೆ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಜೈಲಿನ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net