ಒಳಚರಂಡಿಗೆ ಇಳಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು: ಮತ್ತೊಬ್ಬನ ಸ್ಥಿತಿ ಗಂಭೀರ

Crime Logo
Published on

ಬೆಂಗಳೂರು: ಆರ್‌ಎಂಸಿ ಯಾರ್ಡ್‌ನ ಆಶ್ರಯನಗರದಲ್ಲಿ ಒಳಚರಂಡಿಗೆ ಇಳಿದು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಪುಟ್ಟ (೩೨) ಮೃತಪಟ್ಟವರು. ಪುಟ್ಟ ಜತೆಗೆ ಒಳಚರಂಡಿಗೆ ಇಳಿದಿದ್ದ ಆಂಥೋಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪುಟ್ಟ ಅವರ ತಂದೆ ಲಕ್ಷ್ಮಣ್ ಎಂಬುವರು ನೀಡಿದ ದೂರಿನ ಮೇರೆಗೆ ಆಂಥೋಣಿ, ಆನಂದ್ ಕುಮಾರ್, ದೇವರಾಜು ಹಾಗೂ ಇತರರ ವಿರುದ್ಧ ಆರ್.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಶ್ರಯ ನಗರದ ಆರಿಗ ಕಂಪನಿ ಮುಂಭಾಗದ ರಸ್ತೆಯಲ್ಲಿರುವ ಒಳಚರಂಡಿ ಸ್ವಚ್ಚಗೊಳಿಸಲು ಪುಟ್ಟ ಮತ್ತು ಆಂಥೋಣಿ ಜತೆ ಗುಂಡಿಗೆ ಇಳಿದಿದ್ದರು. ಈ ವೇಳೆ ಕೆಟ್ಟ ವಾಸನೆಯಿಂದ ಇಬ್ಬರು ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ಅದನ್ನು ಗಮನಿಸಿದ ಆನಂದ್ ಕುಮಾರ್, ದೇವರಾಜು ಸ್ಥಳೀಯರ ನೆರವು ಪಡೆದು ಗುಂಡಿಯಿಂದ ಹೊರಕ್ಕೆ ಎಳೆದುತಂದು ಮಜ್ಜಿಗೆ ಹಾಗೂ ನೀರು ಕುಡಿಸಿ ಆರೈಕೆ ಮಾಡಿ, ಮನೆಗೆ ಕಳುಹಿಸಿದ್ದರು. ಆದರೆ, ಅದೇ ದಿನ ರಾತ್ರಿ ಮನೆಯಲ್ಲಿ ಮಲಗಿದ್ದ ಪುಟ್ಟ ಏಕಾಏಕಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪುಟ್ಟ ಹಾಗೂ ಆಂಥೋಣಿಗೆ ಹಣದ ಆಮಿಷವೊಡ್ಡಿ ಆನಂದ್ ಕುಮಾರ್ ಮತ್ತು ದೇವರಾಜು, ಬಿಡಬ್ಲೂೃಎಸ್‌ಎಸ್‌ಬಿಗೆ ಸೇರಿದ ಒಳಚರಂಡಿ ಸ್ವಚ್ಚಗೊಳಿಸಲು ಇಳಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪುಟ್ಟ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಪರಿಚಯಸ್ಥ ಆಂಥೋಣಿ ಕೋರಿಕೆ ಮೇರೆಗೆ ಒಳಚರಂಡಿ ಸ್ವಚ್ಚಗೊಳಿಸಲು ಹೋಗಿದ್ದರು ಎಂಬುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲಾಗಿದೆ. ಸದ್ಯ ಆಂಥೋಣಿ ಆಸ್ಪತ್ರೆಯಲ್ಲಿದ್ದಾನೆ. ಆನಂದ್ ಕುಮಾರ್ ಮತ್ತು ದೇವರಾಜ್‌ಗೆ ನೋಟಿಸ್ ಕೊಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net