

48 Crore A Day: ಒಂದೊಳ್ಳೆ ಸಂಸ್ಥೆಯಲ್ಲಿ ಉನ್ನತ ಹುದ್ದೆ ಸಿಕ್ಕರೆ ಸಾಕು ಎನ್ನದ ನಾವು, ಆ ಸ್ಥಾನಕ್ಕಿಂತ ಹೆಚ್ಚಿನ ಆದಾಯ ಸಿಗಬೇಕು ಎಂಬ ಹಪಾಹಪಿಯನ್ನು ಹೊಂದಿರುತ್ತೇವೆ. ಜೀವನದಲ್ಲಿ ಪ್ರತಿಯೊಬ್ಬರ ಮಹತ್ವದ ಗುರಿ ಇದೇ ಆಗಿದೆ. ಸಾವಿರಕ್ಕಿಂತ ಲಕ್ಷ ಹೆಚ್ಚು, ಲಕ್ಷಕ್ಕಿಂತ ಕೋಟಿ ಹೆಚ್ಚು ಎಂಬ ಲೆಕ್ಕಾಚಾರದಲ್ಲಿ ತೊಡಗುವ ಮಂದಿ, ಹೆಚ್ಚೆಚ್ಚು ಹಣ ಸಂಪಾದಿಸಬೇಕು. ಐಷಾರಾಮಿ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಅಂತವರಿಗೆ ಈ ಸುದ್ದಿ ಖಂಡಿತ ಅಚ್ಚರಿ ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
ಭಾರತೀಯ ಮೂಲದ ಈ ವ್ಯಕ್ತಿ ವಾರ್ಷಿಕ ಬರೋಬ್ಬರಿ 17,500 ಕೋಟಿ ರೂ.ಗಳ ಆದಾಯದೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿ ಹೊರಹೊಮ್ಮಿದ್ದಾರೆ. ಇದು ನಿಜಕ್ಕೂ ಹುಬ್ಬೇರಿಸುವಂತೆ ವಿಚಾರವೇ. ಪ್ರಮುಖ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬ್ಯಾಟರಿ ಕಂಪನಿಯಾದ ಕ್ವಾಂಟಮ್‌ಸ್ಕೇಪ್‌ನ ಸಂಸ್ಥಾಪಕರಾದ ಜಗದೀಪ್ ಸಿಂಗ್, ಪ್ರತಿದಿನ 48 ಕೋಟಿ ರೂ. ಆದಾಯ ಗಳಿಸುತ್ತಾರೆ. ಇದು ಅನೇಕ ಪ್ರಮುಖ ಕಂಪನಿಗಳ ವಾರ್ಷಿಕ ಆದಾಯವನ್ನೇ ಮೀರಿಸುವ ಸಂಪಾದನೆ ಆಗಿದೆ ಎಂಬುದೇ ಅಚ್ಚರಿ ಸಂಗತಿ.
ಜಗದೀಪ್ ಅವರ 48 ಕೋಟಿ ರೂ. ಆದಾಯವು ಸುಮಾರು 2.3 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಯ್ಕೆಗಳನ್ನು ಸಹ ಒಳಗೊಂಡಿದೆ ಎಂದು ವರದಿ ಹೇಳಿದೆ. ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯಿಂದ ಬಿ.ಟೆಕ್ ಪದವಿ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿರುವ ಸಿಂಗ್, ಹೆವ್ಲೆಟ್-ಪ್ಯಾಕರ್ಡ್ (HP) ಮತ್ತು ಸನ್ ಮೈಕ್ರೋಸಿಸ್ಟಮ್ಸ್‌ನಂತಹ ಪ್ರಸಿದ್ಧ ಸಂಸ್ಥೆಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು.
ಇದಾದ ಬಳಿಕ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದ ಅವರು, 1992ರಲ್ಲಿ ಏರ್‌ಸಾಫ್ಟ್ ಲಾಂಚ್ ಮಾಡಿದರು. ವಿವಿಧ ಕಂಪನಿಗಳಲ್ಲಿ ಒಂದು ದಶಕದ ಅನುಭವದ ಪಡೆದಿರುವ ಜಗದೀಪ್ ಸಿಂಗ್, 2010ರಲ್ಲಿ ಕ್ವಾಂಟಮ್‌ಸ್ಕೇಪ್ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆ ವಿಶೇಷವಾಗಿ ಬ್ಯಾಟರಿ ತಂತ್ರಜ್ಞಾನದ ಮೇಲೆ ಗಮನಹರಿಸಿದ್ದು, ಹೊಸ ಹೊಸ ಆವಿಷ್ಕಾರಗಳತ್ತ ದಾಪುಗಾಲಿಟ್ಟಿದೆ. ಮೈಕ್ರೋಸಾಫ್ಟ್ ಸಿಇಓ ಆದ ಬಿಲ್ ಗೇಟ್ಸ್ ಮತ್ತು ವೋಕ್ಸ್‌ವ್ಯಾಗನ್‌ನಂತಹ ಹೂಡಿಕೆದಾರರ ಬೆಂಬಲದೊಂದಿಗೆ, ಕ್ವಾಂಟಮ್‌ಸ್ಕೇಪ್ ಕಂಪನಿ ಸಾರಿಗೆ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಜಗದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ವಾಂಟಮ್‌ಸ್ಕೇಪ್ ಇವಿ ಬ್ಯಾಟರಿ ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುತ್ತಿದೆ. ಫೆಬ್ರವರಿ 16, 2024ರಂದು ಸಂಸ್ಥೆಯ ಸಿಇಓ ಸ್ಥಾನದಿಂದ ಕೆಳಗಿಳಿದ ಸಿಂಗ್, ಶಿವ ಶಿವರಾಮ್‌ಗೆ ಅಧಿಕಾರವನ್ನು ಹಸ್ತಾಂತರಿಸಿದರು. ಶಿವರಾಮ್ ಸೆಪ್ಟೆಂಬರ್ 2023ರಲ್ಲಿ ಕಂಪನಿಯ ಅಧ್ಯಕ್ಷರಾಗಿ ಸೇರಿಕೊಂಡು, ಇಂದು ಜಗದೀಪ್ ಅವರ ಮೆಚ್ಚುಗೆಗೆ ಪಾತ್ರರಾಗಿ ತಮ್ಮ ಸೇವೆ ಮುಂದುವರಿಸಿದ್ದಾರೆ. ಮಾಹಿತಿ ಪ್ರಕಾರ, ಜಗದೀಪ್ "ಸ್ಟೆಲ್ತ್ ಸ್ಟಾರ್ಟ್‌ಅಪ್"ಗೂ ಸಿಇಓ ಆಗಿದ್ದಾರೆ,(ಏಜೆನ್ಸೀಸ್).