

ಬೆಳಗಾವಿ: ಸದ್ಯದ ಕಾಲಘಟ್ಟದಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಲು ಕಾರಣಗಳೇ ಬೇಕಿಲ್ಲ ಎಂಬಂತಾಗಿದೆ. ಬಾಲಿಷ ಎಂಬಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಹತ್ಯೆ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮದ್ಯ ವ್ಯಸನಿಗಳು ಯಾವ ಸಂದರ್ಭದಲ್ಲಿ, ಯಾವ ಮನಸ್ಥಿತಿಯಲ್ಲಿರುತ್ತಾರೋ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.
ಇದೀಗ ಗುಟ್ಕಾ ತಿಂದು, ಉಗಿದ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಜಗಳ ಕೊಲೆಯ ಮೂಲಕ ಅಂತ್ಯ ಕಂಡಿದೆ. ಮಂಜುನಾಥ ಸುಣಗಾರ ಹಾಗೂ ಅಜಯ್ ಹಿರೇಮಠ ಎಂಬಿಬ್ಬರು ತಡರಾತ್ರಿ ಒಟ್ಟಿಗೆ ಸೇರಿಕೊಂಡು ಮದ್ಯಪಾನ ಮಾಡಿದ್ದಾರೆ. ಬಳಿಕ ಪಾನ್ ಶಾಪ್ ಬಳಿ ಬಂದು ಗುಟ್ಕಾ ಸೇವಿಸಿದ್ದಾರೆ. ಈ ವೇಳೆ ಗುಟ್ಕಾ ತಿಂದು ಉಗಿದ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ಏರ್ಪಟ್ಟಿದೆ.
ಗುಟ್ಕಾ ತಿಂದು ಉಗಿದ ವಿಚಾರಕ್ಕೆ ಆರಂಭವಾದ ಜಗಳ ತಾರಕಕ್ಕೇರಿದೆ. ಮದ್ಯದ ನಶೆಯಲ್ಲಿದ್ದ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಅಜಯ್ ಹಿರೇಮಠ ಎಂಬಾತ ಮಂಜುನಾಥ ಸುಣಗಾರ(45)ನ ತಲೆಗೆ ಅಲ್ಲೇ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಮಧ್ಯರಾತ್ರಿ ಹೊತ್ತಿನಲ್ಲಿ ನಡೆದಿದೆ.
ಮಂಜುನಾಥ ಸುಣಗಾರನನ್ನು ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಹತ್ಯೆಗೈದು ಅಜಯ್ ಹಿರೇಮಠ ಪರಾರಿಯಾಗಿದ್ದಾನೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪರಾರಿಯಾಗಿರುವ ಆರೋಪಿ ಅಜಯ್ ಹಿರೇಮಠಗಾಗಿ ಶೋಧ ಕಾರ್ಯ ಮುಂದುವರಿದಿದೆ.