ಬಿಹಾರ ಸಿಎಂ ನೋಡಲು ಭದ್ರತಾ ಸಿಬ್ಬಂದಿಗಳ ಮಧ್ಯೆ ನುಸುಳಿ ಬಂದ ವ್ಯಕ್ತಿ; ಆತನ ಹೆಸರು ಕೂಡ ನಿತೀಶ್​ ಕುಮಾರ್​!

Untitled design - 2023-08-15T141845.587
Published on

ಬಿಹಾರ: ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನೋಡಲು ಭದ್ರತಾ ಸಿಬ್ಬಂದಿಗಳ ಮಧ್ಯೆ ನುಸುಳಿ ವೇದಿಕೆಯ ಮೇಲೆ ವ್ಯಕ್ತಿಯೊಬ್ಬ ಓಡಿ ಬಂದಿದ್ದು, ಆತನನ್ನು ತಡೆದು, ಹೊರಗೆ ಕಳುಹಿಸಿರುವ ಘಟನೆ ಇಂದು ಬಿಹಾರದಲ್ಲಿ ವರದಿಯಾಗಿದೆ.

ವ್ಯಕ್ತಿಯನ್ನು 26 ವರ್ಷದ ನಿತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಿಎಂ ಅನ್ನು ನೋಡಲು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಓಡಿ ಬರಲು ಕಾರಣವೇನು ಎಂದು ಪ್ರಶ್ನಿಸಿದಕ್ಕೆ ಉತ್ತರಿಸಿದ ನಿತೀಶ್​, "ಬಿಹಾರ ಮಿಲಿಟರಿ ಪೊಲೀಸ್ (BMP) ಸಿಬ್ಬಂದಿಯಾಗಿದ್ದ ನನ್ನ ತಂದೆ, ಕೆಲವು ವರ್ಷಗಳ ಹಿಂದೆ ಕರ್ತವ್ಯದಲ್ಲಿ ಸಾವನ್ನಪ್ಪಿದರು. ಅವರ ಉದ್ಯೋಗವನ್ನು ಪಡೆಯುವ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಬೇಕಿತ್ತು" ಎಂದು ಹೇಳಿದ್ದಾರೆ.

ಸಿಎಂ ನಿತೀಶ್​ ಕುಮಾರ್ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ವ್ಯಕ್ತಿ ಕೈಯಲ್ಲಿ ಬಿತ್ತಿ ಪತ್ರ ಹಿಡಿದು, ಹೈ-ಸೆಕ್ಯುರಿಟಿಯನ್ನು ಭೇದಿಸಿ, ಪ್ರವೇಶಿಸಲು ಯತ್ನಿಸಿದ್ದಾರೆ. ಆದ್ರೆ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಅವರನ್ನು ತಡೆದು, ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ವ್ಯಕ್ತಿಯನ್ನು ಮುಂಗೇರ್ ಜಿಲ್ಲೆಯ ನಿವಾಸಿ ದಿವಂಗತ ರಾಜೇಶ್ವರ ಪಾಸ್ವಾನ್ ಅವರ ಪುತ್ರ ನಿತೀಶ್ ಕುಮಾರ್ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net