

ಲಖನೌ: ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನವನ್ನು ಆರಂಭಿಸಿದ್ದ ಮಹಿಳೆಯೊಬ್ಬಳು ಇದೀಗ ಬೆಟ್ವಾ ನದಿಯಲ್ಲಿ ಶವವಾಗಿ ತೇಲಿರುವ ಘಟನೆ ನಡೆದಿದೆ. ಪ್ರಕರಣ ದಾಖಲಾಗಿ ಮೂರೇ ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕಂಚನ್ (21) ಎರಡು ವರ್ಷಗಳ ಹಿಂದೆ ಅಮಿತ್ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ಒಂದು ಗಂಡು ಮಗುವೂ ಇದೆ. ಇತ್ತೀಚೆಗೆ ದಾಂಪತ್ಯದಲ್ಲಿ ಕಲಹ ಮೂಡಿದ್ದು, ಕಂಚನ್ ತನ್ನ ತವರು ಮನೆಗೆ ತೆರಳಿದ್ದಾಳೆ.
ಹೆಂಡತಿಯ ಮನವೊಲಿಸಲು ನಿರ್ಧರಿಸಿದ ಅಮಿತ್, ಇತ್ತೀಚೆಗೆ ಆಕೆಯ ತವರು ಮನೆಯ ಬಳಿ ಹೋಗಿದ್ದು, ಬೆಟ್ವಾ ನದಿ ದಂಡೆ ಹತ್ತಿರ ಬಾ ಎಂದು ಕರೆದಿದ್ದಾನೆ. ಪ್ರೀತಿಯಿಂದ ಮಾತನಾಡಿದ ಗಂಡನ ಕರೆಗೆ ಓಗೊಟ್ಟು ಕಂಚನ್ ಅಲ್ಲಿಗೆ ತೆರಳಿದ್ದಾಳೆ. ನಂತರ ಅವರಿಬ್ಬರು ಅಲ್ಲಿಯೇ ದೈಹಿಕ ಸಂಪರ್ಕವನ್ನೂ ಹೊಂದಿದ್ದಾನೆ. ಅದಾದ ನಂತರ ಕಂಚನ್ ಕಾಣೆಯಾಗಿದ್ದಾಳೆ. ಈ ವಿಚಾರವಾಗಿ ಸ್ವತಃ ಆಕೆಯ ಗಂಡನೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಕಂಚನ್ ಹುಡುಕಾಟ ಆರಂಭಿಸಿದ ಪೊಲೀಸರಿಗೆ ಆಕೆಯ ಮೃತದೇಹ ನದಿ ದಂಡೆಯಲ್ಲಿ ಸಿಕ್ಕಿದೆ. ಅದಾದ ನಂತರ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ಅಮಿತ್ ಮೇಲೆ ಅನುಮಾನಗಳು ಶುರುವಾಗಿದೆ. ಸರಿಯಾದ ರೀತಿಯಲ್ಲಿ ಬಾಯಿ ಬಿಡಿಸಿದಾಗ ಆತ ನಿಜ ಘಟನೆಯನ್ನು ವಿವರಿಸಿದ್ದಾನೆ. ಆಕೆ ಮೇಲೆ ಕೋಪವಿದ್ದಿದ್ದಕ್ಕೇ ನದಿ ದಂಡೆಗೆ ಕರೆಸಿಕೊಂಡು, ಕಾಮದ ಆಸೆ ತೀರಿಸಿಕೊಂಡು ನಂತರ ಕೊಲೆ ಮಾಡಿ ನದಿಗೆ ಎಸೆದೆ ಎಂದು ಹೇಳಿದ್ದಾನೆ. ಬಾಳಿ ಬದುಕಬೇಕಿದ್ದ ಕಂಚನ್ನನ್ನು ಕೊಂದ ಅಮಿತ್ ಇದೀಗ ಜೈಲು ಸೇರಿದ್ದಾನೆ. (ಏಜೆನ್ಸೀಸ್)