ಹಿಮ ಯಮನಿಗೆ ಎಂಟು ಬಲಿ! 160ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿರುವ ಶಂಕೆ

snow
Published on

ಚಮೋಲಿ (ಉತ್ತರಾಖಂಡ): ಇಲ್ಲಿನ ತಪೋವನ ಏರಿಯಾದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಚಮೋಲಿ ಜಿಲ್ಲೆಯ ಜೋಶಿ ಮಠ ಬಳಿಯಿರುವ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, 160ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಎಂಟು ಮಂದಿಯ ಶವ ಸಿಕ್ಕಿರುವುದಾಗಿ ಹೇಳಲಾಗಿದೆ.

ರಿಷಿಗಂಗಾ ವಿದ್ಯುತ್​ ಯೋಜನೆಗೆ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ಎನ್​ಡಿಆರ್​ಎಫ್​, ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ), ಎಸ್​ಡಿಆರ್​ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅಲಕಾನಂದ ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ. ಅನೇಕ ಮುನ್ನೆಚ್ಛರಿಕಾ ಕ್ರಮವಾಗಿ ಭಾಗಿರಥಿ ನದಿಯ ಹರಿವನ್ನು ನಿಲ್ಲಿಸಲಾಗಿದೆ. ಅಲಕಾನಂದ ನೀರಿನ ಹರಿವನ್ನು ತಡೆಗಟ್ಟಲು ಶ್ರೀನಗರ ಅಣೆಕಟ್ಟು ಮತ್ತು ರಿಷಿಕೇಶ ಅಣೆಕಟ್ಟು ಖಾಲಿ ಮಾಡಲಾಗಿದೆ.

ಈ ದುರ್ಘಟನೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ಮೂಡಿದೆ. ವಿಷ್ಣುಪ್ರಯಾಗ್​, ಜೋಶಿಮಠ, ಕರ್ಣಪ್ರಯಾಗ್​, ರುದ್ರಪ್ರಯಾಗ್​, ರಿಷಿಕೇಶ ಮತ್ತು ಹರಿದ್ವಾರದ ಜನರಿಗೆ ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೆ, ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರೆ ಮತ್ತು ನಿಮಗೆ ಯಾವುದೇ ಸಹಾಯ ಬೇಕಾದರೆ, ದಯವಿಟ್ಟು ವಿಪತ್ತು ಕಾರ್ಯಾಚರಣೆ ಕೇಂದ್ರ ಸಂಖ್ಯೆ 1070 ಅಥವಾ 9557444486 ಅನ್ನು ಸಂಪರ್ಕಿಸಿ ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಅವರು ದೂರವಾಣಿ ಕರೆ ಮೂಲಕ ಪ್ರವಾಹ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದು, ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆಂದು ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net