

ನವದೆಹಲಿ: ವೇಗದಲ್ಲಿ ಚಲಿಸುತ್ತಿದ್ದ ರೇಂಜ್ ರೋವರ್ ಕಾರಿನಿಂದ ರಸ್ತೆಯುದ್ದಕ್ಕೂ ವ್ಯಕ್ತಿಯೊಬ್ಬ ಹಣದ ಮಳೆ ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಬೇರೊಂದು ಕಾರಿನಲ್ಲಿ ಬರುತ್ತಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನೋಯ್ಡಾದ ಸೆಕ್ಟರ್ 20ರಲ್ಲಿ ರಾತ್ರಿ ವೇಳೆ ಕಾರು ಸಂಚರಿಸುತ್ತಿದ್ದ ಸಮಯದಲ್ಲಿ ಹಣದ ಮಳೆಯನ್ನು ಸುರಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೋಯ್ಡಾ ಟ್ರಾಫಿಕ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕ್ರಮ ತೆಗೆದುಕೊಂಡಿದ್ದಾರೆ.
ವರದಿಯೊಂದರ ಪ್ರಕಾರ ವಿವಿಧ ನಿಯಮಗಳ ಉಲ್ಲಂಘನೆ ಉಲ್ಲೇಖಿಸಿ ಟ್ರಾಫಿಕ್ ಪೊಲೀಸರು ಕಾರಿನ ಮಾಲೀಕರಿಗೆ 21 ಸಾವಿರ ರೂ. ದಂಡ ವಿಧಿಸಿದ್ದಾರೆ. ಆದರೆ, ರಸ್ತೆ ಮೇಲೆ ಹಣ ಸುರಿದಿರುವ ವ್ಯಕ್ತಿಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ವಿಡಿಯೋದಲ್ಲೂ ವ್ಯಕ್ತಿಯ ಮುಖವು ಸ್ಪಷ್ಟವಾಗಿಲ್ಲವಾದರೂ, ಅವರು ಕೋಟ್ ಧರಿಸಿರುವುದನ್ನು ಕಾಣಬಹುದು.
ರೇಂಜ್ ರೋವರ್‌ಗೆ ಸಮಾನಾಗಿ ಚಲಿಸುತ್ತಿದ್ದ ಮತ್ತೊಂದು ವಾಹನದಿಂದ ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಣ ಚೆಲ್ಲಿದ ಅಪಾಯಕಾರಿ ನಡವಳಿಕೆಯನ್ನು ಹಲವಾರು ಜನರು ಖಂಡಿಸಿದ್ದಾರೆ. ಈ ಕ್ರಮವು ರಸ್ತೆಯಲ್ಲಿರುವ ಇತರ ನಾಗರಿಕರ ಸುರಕ್ಷತೆಗೆ ಅಪಾಯವಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. (ಏಜೆನ್ಸೀಸ್)