ಪಾಪ್ಯುಲರ್ ಆಗಲು ಹಾವನ್ನು ಬಾಯಿ ಒಳಗೆ ಇಟ್ಟುಕೊಂಡ ಯುವಕ! ಕೊನೆಗೆ ಏನಾಯ್ತು ನೋಡಿ..

snake
Published on

ಹೈದರಾಬಾದ್​: ಸೋಷಿಯಲ್ ಮೀಡಿಯಾ ಕ್ರೇಜ್ ಹೆಚ್ಚಾದ ನಂತರ ಯುವಜನ ಹುಚ್ಚಾಟ ಪ್ರದರ್ಶಿಸುತ್ತ ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿರುವ ಘಟನೆಗಳನ್ನು ಕಾಣುತ್ತಿರುತ್ತೇವೆ. ಅದೇ ರೀತಿಯ ಘಟನೆಯೊಂದು ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಹಾವಿನ ಜೊತೆ ಆಟವಾಡಿದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಕಾಮರೆಡ್ಡಿ ಜಿಲ್ಲೆ, ಬಾನಸುವಾಡ ಮಂಡಲದ ದೇಸಾಯಿಪೇಟೆ ಪೋಚಾರಂ ಕಾಲೋನಿಯ ಶಿವರಾಜು ಎಂಬ ಯುವಕನಿಗೆ ರೀಲ್ಸ್​ ಮಾಡುವ ಹುಚ್ಚು ಇತ್ತು. ತಾನು ಹೇಗಾದರೂ ಜನಪ್ರಿಯತೆ ಗಳಿಸಬೇಕು ಎಂದು ಹಾತೊರೆಯುತ್ತಿದ್ದ. ಇದೇ ಹಿನ್ನೆಲೆಯಲ್ಲಿ ವಿಷಪೂರಿತ ಹಾವು ತಂದು ಜನರೆದುರು ಕೈಚಳಕ ಪ್ರದರ್ಶಿಸಿದ್ದಾನೆ.

ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡು ಫೋಟೋ, ವೀಡಿಯೋಗಳಿಗೆ ಪೋಸ್ ಕೊಟ್ಟಿದ್ದ ಶಿವರಾಜು ಬಾಯಲ್ಲಿ ಬಹಳ ಹೊತ್ತು ಹಿಡಿದುಕೊಂಡು ಜನರಿಗೆ ಕೈಮುಗಿದು ನಮಸ್ಕರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆ ವೇಳೆ ಹಾವು ಬಹಳ ಹೊತ್ತು ನರಳಳಿದೆ. ಯುವಕ ಮಾಡಿದ ಸಾಹಸ ನೋಡಿ ನೆರೆದವರೆಲ್ಲ ಬೆಚ್ಚಿಬಿದ್ದಿದ್ದಾರೆ.

ಸ್ವಲ್ಪ ಹೊತ್ತು ವಿಡಿಯೋ, ಫೋಟೊ ತೆಗೆದ ಶಿವರಾಜು ಹಾವನ್ನು ಬಾಯಿಂದ ಹೊರತೆಗೆದಿದ್ದಾನೆ. ಆ ನಂತರ ಸ್ವಲ್ಪ ಹೊತ್ತು ಅದರೊಂದಿಗೆ ಚಮತ್ಕಾರ ಮಾಡಿದ್ದಾನೆ. ಈ ವೇಳೆ ಹಾವು ಯುವಕನ ಕೈಗೆ ಕಚ್ಚಿದೆ. ಹಾವು ಕಡಿತದಿಂದ ಆತ ಅದನ್ನು ಪಕ್ಕಕ್ಕೆ ಎಸೆದು ಕಿರುಚಿದ್ದಾನೆ. ಗಾಬರಿಗೊಂಡ ಸ್ನೇಹಿತರು ಹಾಗೂ ಸ್ಥಳೀಯರು ಕೂಡಲೇ ಆತನನ್ನು ಬಾನ್ಸುವಾಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ವಿಷ ದೇಹ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶಿವರಾಜು ಮೃತಪಟ್ಟಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಹಾವಿನ ಜೊತೆ ಸರಸವಾಡಿದರೆ ಹೀಗಾಗುತ್ತದೆ ಎಂದು ಕಾಮೆಂಟ್​ ಮಾಡಿದರೆ, ಇನ್ನು ಕೆಲವರು ವಿಷಪೂರಿತ ಹಾವು ಎಂದು ಗೊತ್ತಿದ್ದರೂ ಏಕೆ ಹಿಡಿದು ತಂದೆ? ಹುಚ್ಚಾಟಕ್ಕೆ ಏಕೆ ಇಳಿದೆ? ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net