

ಜೈಪುರ: ಯುವಕ-ಯುವತಿಯ ಸಂಬಂಧದ ವಿಚಾರಕ್ಕೆ ನಾನಾ ರೀತಿಯ ಗಲಾಟೆಗಳು ಆಗುತ್ತವೆ. ಅಂಥದ್ದೇ ಒಂದು ಗಲಾಟೆಯಲ್ಲಿ ಯುವಕನೊಬ್ಬನನ್ನು ಬೆತ್ತಲಾಗಿಸಿದ್ದಲ್ಲದೆ, ಆತನಿಗೆ ಥಳಿಸಿ, ತಲೆ ಬೋಳಿಸಿ, ಅವನ ಬೈಕ್ಗೆ ಬೆಂಕಿ ಇಟ್ಟ ಪ್ರಕರಣ ನಡೆದಿದೆ.
ಮುಕ್ತಿಯಾರ್ ಖಾನ್ ಎಂಬ 25 ವರ್ಷದ ಯುವಕ, ಯುವತಿಯೊಬ್ಬಳನ್ನು ಭೇಟಿಯಾಗಲು ಬಂದು ಇಂಥದ್ದೊಂದು ಫಜೀತಿಗೆ ಒಳಗಾಗಿದ್ದಾನೆ. ಮಾತ್ರವಲ್ಲ, ಈ ಪ್ರಕರಣದ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಆತ ದೂರು ನೀಡದಿದ್ದರೂ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಮೋಹನ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದು ಮೂರು ದಿನಗಳ ಹಿಂದೆ ನಡೆದಿದ್ದು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಕ್ತಿಯಾರ್ ಖಾನ್ ತನ್ನದೇ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಆಗಾಗ ಭೇಟಿಯಾಗುತ್ತಿದ್ದ. ಈ ವಿಷಯ ಗೊತ್ತಿದ್ದ ಕೆಲವರು ಕಾದು ಆತನನ್ನು ಹಿಡಿದು ಥಳಿಸಿ, ಬೆತ್ತಲಾಗಿಸಿ, ತಲೆ ಬೋಳಿಸಿ, ಅವನ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಆದರೆ ಇಷ್ಟಕ್ಕೆಲ್ಲ ಕಾರಣ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.