ಪ್ರಿಯತಮೆಯ ಮದುವೆ ನಿಲ್ಲಿಸಲು ಮುಂದಾದ ಪಾಗಲ್ ಪ್ರೇಮಿ; ಯುವತಿ ಮನೆಯವರೇ ಹತ್ಯೆ ಮಾಡಿದ್ದಾರೆಂದು ನಾಟಕ!

Marriage
Published on

ಉತ್ತರಪ್ರದೇಶ: ಪ್ರೀತಿಸಿದ ಹುಡುಗಿಯ ಮದುವೆ ನಿಲ್ಲಿಸಲು ಯುವಕನೊಬ್ಬ ಸತ್ತು ಹೋದಂತೆ ನಾಟಕವಾಗಿಡಿದ್ದಾನೆ. ಯುವತಿ ಮನೆಯವರು ಅಪಹರಣಗೈದು ಕೊಲೆ ಮಾಡಿರುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ವೈರಲ್ ಆಗಿರುವ ವಿಡಯೋದಲ್ಲಿ ಯುವಕನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಮುಖದಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ.

ಈ ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಶಾಬಾಜ್‌ಪುರ ಕಾಲಾ ಗ್ರಾಮದಲ್ಲಿ ನಡೆದಿದೆ. ಹತ್ಯೆಗೀಡಾದಂತೆ ನಾಟಕವಾಡಿದ ಯುವಕ ವಾಸಿಂ ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಮದುವೆಗೆ ನಿರಾಕರಿಸಿದ ಯುವತಿ ಮನೆಯವರು

ಬಂಧಿತ ವಾಸಿಂ ತನ್ನ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಮನೆಯವರಿಗೂ ತಿಳಿಸಿದ್ದ. ಆದರೆ ಜಾತಿಯ ಕಾರಣಕ್ಕೆ ಯುವತಿಯ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಬೇರೊಬ್ಬ ಯುವಕನೊಂದಿಗೆ ಏಪ್ರಿಲ್ 24ರಂದು ಮದುವೆ ಮಾಡಲು ಮುಂದಾಗಿದ್ದರು.

ತಾನು ಪ್ರೀತಿಸಿದ ಹುಡುಗಿಯ ಮದುವೆ ದಿನಾಂಕ ಗೊತ್ತಾಗುತ್ತಿದ್ದಂತೆ ವಾಸಿಂ, ವಿವಾಹ ನಿಲ್ಲಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಏಪ್ರಿಲ್ 23ರ ಸಂಜೆ ತನ್ನನ್ನು ವಧುವಿನ ಮನೆಯವರು ಅಪಹರಣಗೈದು, ಕೊಲೆ ಮಾಡಿರುವಂತೆ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ. ಈ ಮೂಲಕ ಮದುವೆ ನಿಲ್ಲಿಸುವ ಉಪಾಯ ಹೂಡಿದ್ದಾನೆ.

ಮೃತದೇಹಕ್ಕೆ ಹುಡುಕಾಟ

ವಿಡಿಯೋ ವೈರಲ್ ಆಗುತ್ತಿದ್ದಂತೆ ವಾಸಿಂ ಮನೆಯವರು ಅಸ್ಮೋಲಿ ಪೊಲೀಸ್ ಠಾಣೆಗೆ ತೆರಳಿ ಯುವತಿಯ ಕುಟುಂಬದವರು ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ವಾಸಿಂನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ವಾಸಿಂ ಜೀವಂತವಾಗಿ ತನ್ನ ಸಹೋದರಿಯ ಮನೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ.

ತಪ್ಪು ಒಪ್ಪಿಕೊಂಡ ಆರೋಪಿ

ವಾಸಿಂನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ತಾನು ನಾಟಕವಾಡಿರುವ ಉದ್ಧೇಶದ ಬಗ್ಗೆ ಹೇಳಿಕೊಂಡಿದ್ದಾನೆ. ಗೆಳತಿಯ ಮದುವೆ ನಿಲ್ಲಿಸಲು ಬಯಸಿ ಕೃತ್ಯ ಎಸಗಿರುವಾಗಿ ಬಹಿರಂಗಪಡಿಸಿದ್ದಾನೆ. ಸದ್ಯ ವಾಸಿಂಗೆ ಸಹಾಯ ಮಾಡಿದ ಆರೋಪದಡಿ ಆತನ ಸ್ನೇಹಿತ ಅನಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net