

ಮುಂಬೈ: 500 ರೂಪಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ತನ್ನ ಸಹೋದ್ಯೋಗಿಯನ್ನೇ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಘಟನೆ ಆಗಸ್ಟ್ 8ರಂದು ನಡೆದಿದ್ದು, ಗುಜರಿ ವ್ಯಾಪಾರಿ ವಿಕ್ಕಿ ಚಿಂದಾಲಿಯಾ(27) ಅವರ ಮೃತದೇಹವು ಪನ್ವೇಲ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಸಚಿನ್ ಶಿಂಧೆ(30)ನನ್ನು ಬಂಧಿಸಿ ವಿಚಾರಾಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪನ್ವೇಲ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಜುಮ್ ಭಗವಾನ್ ವಿಕ್ಕಿ ಚಿಂದಾಲಿಯಾ ಹಾಗೂ ಆರೋಪಿ ಸಚಿನ್ ಶಿಂಧೆ ಇಬ್ಬರು ಸಹೋದ್ಯೋಗಿಗಳಾಗಿದ್ದು, ಗುಜರಿ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು. ಆಗಸ್ಟ್ 8ರಂದು ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ 500 ರೂಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಶುರುವಾಗಿದ್ದು ಆರೋಪಿ ಸಚಿನ್ ಕುಡಿದ ಮತ್ತಿನಲ್ಲಿ ವಿಕ್ಕಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಪನ್ವೇಲ್ ರೈಲ್ವೆ ನಿಲ್ದಾಣದ ಬಳಿ ಮೃತದೇಹ ಒಂದು ರಸ್ತೆ ಬದಿ ಬಿದ್ದಿರುವ ಕುರಿತು ಸ್ಥಳೀಯರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಸ್ಥಳದಲ್ಲಿ ಸಿಕ್ಕ ವಸ್ತು ಹಾಗೂ ಪ್ರದೇಶದ ಸುತ್ತ ಇರುವ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿ ಆರೋಪಿಯನ್ನು ಔರಂಗಬಾದ್ ಜಿಲ್ಲೆಯ ಗ್ರಾಮ ಒಂದರಲ್ಲಿ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಮೃತ ವಿಕ್ಕಿ ತನಗೆ 500 ರೂಪಾಯಿ ಹಣ ಕೊಡಬೇಕಾಗಿತ್ತು. ಆಗಸ್ಟ್ 8ರಂದು ಇಬ್ಬರ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಚಾರ್ಜ್ಶೀಟ್ ಸಿದ್ದಪಡಿಸಿ ಶೀಘ್ರದಲ್ಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪನ್ವೇಲ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಜುಮ್ ಭಗವಾನ್ ತಿಳಿಸಿದ್ದಾರೆ.