

ನವದೆಹಲಿ: ಮಹಿಳೆಯೊಬ್ಬಳಿಗೆ ಗುಂಡಿಟ್ಟು ಕೊಂದಿರುವ ಘಟನೆ ನೈಋತ್ಯ ದೆಹಲಿಯ ದಾಬ್ರಿ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೇಣು ಗೋಯೆಲ್ (42) ಕೊಲೆಯಾದ ಮಹಿಳೆ. ಗುರುವಾರ ರಾತ್ರಿ 8.45ರ ಸುಮಾರಿಗೆ ದಾಬ್ರಿ ಪೊಲೀಸ್ ಠಾಣೆಗೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸ್ಥಳಕ್ಕೆ ಹೋದಾಗ ರೇಣು ಎಂಬಾಕೆಯನ್ನು ಆಕೆಯ ಮನೆಯಲ್ಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ರೇಣು ಗೃಹಿಣಿಯಾಗಿದ್ದು, ಆಕೆ ವೈಶಾಲಿ ಕಾಲನಿಯಲ್ಲಿ ಕುಟುಂಬದ ಜತೆ ನೆಲೆಸಿದ್ದಳು ಎಂದು ಡೆಪ್ಯೂಟಿ ಪೊಲೀಸ್ ಕಮಿಷನರ್ (ದ್ವಾರಕ) ಎಂ. ಹರ್ಷವರ್ಧನ್ ತಿಳಿಸಿದ್ದಾರೆ.
ಬಳಿಕ ಪೊಲೀಸ್ ತಂಡವನ್ನು ರಚಿಸಿ ಆರೋಪಿಯನ್ನು ಹಿಡಿಯುವ ಪ್ರಯತ್ನ ನಡೆದಿತ್ತು. ಆದರೆ, ಆರೋಪಿಯು ಕೂಡ ತನಗೆ ತಾನೇ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಧನಕ್ಕೆಂದು ಪೊಲೀಸರ ತಂಡ ಆರೋಪಿಯ ಮನೆಗೆ ಹೋದಾಗ ಈ ಘಟನೆ ನಡೆದಿದೆ. ಮಹಡಿಯ ಮೇಲೆ ಪಿಸ್ತೂಲ್ ಸಿಕ್ಕಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಮೃತ ಆರೋಪಿಯನ್ನು ಆಶಿಶ್ (25) ಎಂದು ಗುರುತಿಸಲಾಗಿದೆ.
ಇಬ್ಬರು ಸ್ಥಳೀಯ ಜಿಮ್ನಲ್ಲಿ ಎರಡು ವರ್ಷದ ಹಿಂದೆ ಭೇಟಿಯಾದಾಗ ಇಬ್ಬರು ನಡುವೆ ಸ್ನೇಹ ಬೆಳೆದಿತ್ತು. ಆದರೆ, ರೇಣು ಅವರ ಅತ್ತೆ ಅವರ ಸ್ನೇಹಕ್ಕೆ ಸಮ್ಮತಿಸಿರಲಿಲ್ಲ. ಆಕೆಯ ಗಂಡನಿಗೂ ಇದು ಇಷ್ಟವಿರಲಿಲ್ಲ. ಕೊಲೆಯ ಉದ್ದೇಶವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಮೃತ ಆಶಿಶ್ ಮನೆಯಲ್ಲೂ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಯಾವುದಾದರೂ ಸುಳಿವು ಸಿಗಬಹುದಾ ಅಂತ ಅಕ್ಕಪಕ್ಕದ ಮನೆಯವರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ, ಜಿಮ್ನಲ್ಲಿ ಭೇಟಿಯಾಗಿ ಪರಿಚಯವಾದ ವಿಚಾರ ಬಿಟ್ಟು ಈವರೆಗೂ ಕೊಲೆಗೆ ಕಾರಣ ಏನೆಂಬುದು ತಿಳಿಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)