VIDEO| ಸಾಕುನಾಯಿಗಳ ವಿಚಾರವಾಗಿ ಗಲಾಟೆ; ಇಬ್ಬರ ಕೊಲೆಯಲ್ಲಿ ಅಂತ್ಯ

Pet Dog Shooting
Published on

ಇಂದೋರ್​: ಸಾಕುನಾಯಿಗಳ ವಿಚಾರವಾಗಿ ಶುರುವಾದ ಗಲಾಟೆಯೂ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನ ಕೃಷ್ಣಭಾಗ್​ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಮಲ್​ ಅಚಲಾ(35), ರಾಹುಲ್​ ವರ್ಮಾ(27) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ರಾಜ್​ಪಾಲ್​ ಸಿಂಗ್​ ರಾಜಾವತ್​ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಹಿನ್ನಲೆ

ಇಂದೋರ್​ನ ಕೃಷ್ಣಭಾಗ್​ ಕಾಲೋನಿಯಲ್ಲಿ ರಾಜ್​ಪಾಲ್​ ಹಾಗೂ ವಿಮಲ್​ ತಮ್ಮ ಸಾಕು ನಾಯಿಯನ್ನು ರಾತ್ರಿ 11 ಘಂಟೆ ಸುಮಾರಿಗೆ ವಾಕಿಂಗ್​ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎರಡು ನಾಯಿಗಳು ಒಂದನ್ನೊಂದು ನೋಡಿ ಬೊಗಳಲು ಶುರು ಮಾಡಿದ್ದು, ಶ್ವಾನಗಳ ಮಾಲೀಕರ ನಡುವೆ ವಾಗ್ವಾದ ಶುರುವಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತಿದ್ದಂತೆ ಸಿಟ್ಟಿಗೆದ್ದ ಆರೋಪಿ ರಾಜ್​ಪಾಲ್​ ತನ್ನ ಮನೆಗೆ ತೆರಳಿ 12 ಬೋರ್​ ರೈಫಲ್​ ಮೂಲಕ ಅಚಲ್​ ಹಾಗೂ ಅವರ ಜೊತೆಗಿದ್ದ ರಾಹುಲ್​ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಗಲಾಟೆ ಬಿಡಿಸಲು ಬಂದವರ ಮೇಲೂ ಆರೋಪಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಆರೋಪಿ ರಾಜ್​ಪಾಲ್​, ಆತನ ಮಗ ಸುಧೀರ್​ ಹಾಗೂ ಅವರ ಸಂಬಂಧಿಕ ಶುಭಂ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ ಆರೋಪಿ ಬಳಿ ಇದ್ದ 12 ಬೋರ್​ ರೈಫಲ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತಪ್ಪಿತಸ್ಥರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net