ಕಿರುಕುಳ ಕೊಟ್ರು ಎಂದು ಪೊಲೀಸ್​ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

Pub-crime-1
Published on

ಬದೌನ್: ಶ್ರೀಪಾಲ್​ ಎನ್ನುವ ಯುವಕ, ತನ್ನ ಸೋದರ ಸಂಬಂಧಿಯೊಂದಿಗೆ ಜಗಳವಾಡಿದ್ದು ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಈ ಸಂದರ್ಭ ಈ ಯುವಕ ಬದೌನ್​ ಪೊಲೀಸ್​ ಠಾಣೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸುಟ್ಟ ಗಾಯಗಳಿಂದಾಗಿ ಚಿಂತಾಜನಕ ಸ್ಥಿತಿಗೆ ತಲುಪಿಪದ್ದಾನೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಈತನ ಶರೀರದ ಶೇಕಡಾ 80ರಷ್ಟು ಭಾಗ ಈಗಾಗಲೇ ಸುಟ್ಟುಹೋಗಿದ್ದು ವೈದ್ಯರು ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.

ಶ್ರೀ ಪಾಲ್ ಅವರ ಸಹೋದರ ಕುನ್ವರ್ ಪಾಲ್, 'ಪೊಲೀಸರು ನನ್ನ ಸಹೋದರನನ್ನು ಮೊದಲು ಹೊಡೆದಿದ್ದರು. ಅವನನ್ನು ಬಿಡುಗಡೆ ಮಾಡಲು ನಮ್ಮಿಂದ ಹಣ ಪಡೆದಿದ್ದರು. ಅವರು ನಿರಂತರವಾಗಿ ನಮಗೆ ಚಿತ್ರಹಿಂಸೆ ನೀಡಿ ಹೆಚ್ಚಿನ ಹಣಕ್ಕಾಗಿ ಪೀಡಿಸಿದ್ದರು. ನಾನು ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದೇನೆ ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಸಹೋದರನ ಸ್ಥಿತಿಗೆ ಸ್ಥಳೀಯ ಪೊಲೀಸರೇ ಕಾರಣ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.

ಕುನ್ವರ್ ಪಾಲ್ ಪ್ರಕಾರ, ಎರಡೂ ಪಕ್ಷಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಶ್ರೀ ಪಾಲ್ ವಿರುದ್ಧ ಕಠಿಣ ಸೆಕ್ಷನ್‌ಗಳನ್ನು ದಾಖಲು ಮಾಡಿದ್ದರು. ಸೋಮವಾರ ಸಂಜೆ, ಶ್ರೀ ಪಾಲ್ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಹಸ್ವಾನ್ ಪೊಲೀಸ್‌ ಠಾಣೆಗೆ ಪ್ರವೇಶಿಸಿ ಪೊಲೀಸರು ಉದ್ದೇಶಪೂರ್ವಕವಾಗಿ ತನ್ನನ್ನು ಸಿಕ್ಕಿಸಿ ಹಾಕುತ್ತಿದ್ದಾರೆ ಎಂದು ಕೂಗಿ ಬೆಂಕಿ ಹಚ್ಚಿಕೊಂಡರು. ಆತನನ್ನು ರಕ್ಷಿಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಒಪಿ ಸಿಂಗ್ ಆಸ್ಪತ್ರೆಯಲ್ಲಿ ಶ್ರೀ ಪಾಲ್ ಅವರನ್ನು ಭೇಟಿ ಮಾಡಿ ಮಾತನಾಡಿಸಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಎಸ್‌ಪಿ, 'ಜಮೀನು ವಿವಾದಕ್ಕೆ ಸಂಬಂಧಿಸಿ ತನ್ನ ಸಂಬಂಧಿಕನೊಂದಿಗೆ ಜಗಳವಾಡಿದ್ದ ವ್ಯಕ್ತಿಯೊಬ್ಬರು ಸಹಸ್ವಾನ್ ಪೊಲೀಸ್‌ ಠಾಣೆಯೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆತನ ವಿರುದ್ಧ ಕ್ರಾಸ್‌ ಎಫ್‌ಐಆರ್ ದಾಖಲಾಗಿರುವುದರಿಂದ ಪೊಲೀಸರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಪ್ರಕರಣದ ಬಗ್ಗೆ ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net