

ದುಬೈ: ಸೌದಿ ಅರೇಬಿಯಾದಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣಕ್ಕೆ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬ್ರಿಟನ್ನ ಲೀಡ್ಸ್ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿನಿಯನ್ನು ಬಿಡುಗಡೆ ಮಾಡಲಾಗಿದೆ.
ಸಲ್ಮಾ ಅಲ್-ಶೆಹಾಬ್ 2022ರಲ್ಲಿ ಕೆಲ ಆಕ್ಷೇಪಾರ್ಹ ಟ್ವೀಟ್ಗಳನ್ನು ಮಾಡಿದ್ದರು. ಇದಕ್ಕಾಗಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜನವರಿಯಲ್ಲಿ ಅವರ ಶಿಕ್ಷೆಯನ್ನು ನಾಲ್ಕು ವರ್ಷಗಳಿಗೆ ಇಳಿಸಲಾಗಿತ್ತು. ಹೆಚ್ಚುವರಿಯಾಗಿ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು. ಆದರೆ ಈಗ ಏಕೆ ದಿಢೀರ್ ಬಿಡುಗಡೆ ಮಾಡಲಾಯಿತು ಎಂಬ ಬಗ್ಗೆ ವಿವರ ಸಿಕ್ಕಿಲ್ಲ.
2021ರ ಜನವರಿ 15ರಂದು ಅಲ್-ಶೆಹಾಬ್ರನ್ನು ಬಂಧಿಸಲಾಗಿತ್ತು. ಅವರು ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುತ್ತಿದ್ದಾರೆ. ಸಾಮಾಜಿಕ ರಚನೆಯನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದರು. ಟ್ವಿಟರ್ನಲ್ಲಿ ಅವರು ಭಿನ್ನಮತೀಯ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಆಕ್ಷೇಪಾರ್ಹ ಸಂಗತಿಗಳನ್ನು ಮರುಟ್ವೀಟ್ ಮಾಡುತ್ತಿದ್ದರು. ಸುಳ್ಳು ವದಂತಿಗಳನ್ನು ಹರಡುತ್ತಿದ್ದರು ಎಂಬ ದೂರು ದಾಖಲಾಗಿತ್ತು.