

ನವದೆಹಲಿ: ಇಂದಿನ ದಿನಗಳಲ್ಲಿ ಭಾರತೀಯ ರೈಲ್ವೇ ಪ್ರಯಾಣವು ಅಸ್ತವ್ಯಸ್ತವಾಗಿದೆ. ಕೆಲವೊಮ್ಮೆ ರೈಲುಗಳು ತಡವಾಗಿ ಓಡಾಡುತ್ತವೆ. ಅದರಲ್ಲಿರುವ ಶೌಚಾಲಯವು ಯಾವಾಗಲೂ ನೈರ್ಮಲ್ಯವಾಗಿರುವುದಿಲ್ಲ. ಆದರೆ, ಅಲ್ಲಿನ ಕಿಟಕಿಯಿಂದ ಹೊರನೋಡಿದಾಗ ಏನೋ ಒಂದು ಉಲ್ಲಾಸದ ಅನುಭವವಾಗುವುದಂತೂ ಸತ್ಯ. ಆದರೆ ಇಲ್ಲೊಬ್ಬ ಭಾರತೀಯ ವ್ಲಾಗರ್ ಒಬ್ಬ ಯುರೋಪಿಯನ್ನ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು, (Water Bottle) ಅಲ್ಲಿನ ವ್ಯವಸ್ಥೆಗಳನ್ನು ನೋಡಿದ ನಂತರ ಭಾರತೀಯ ರೈಲ್ವೆ ಪ್ರವಾಸದ ನೆನಪುಗಳನ್ನು ಸಂಪೂರ್ಣವಾಗಿ ಮೆಲಕು ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಲಾಗರ್ ಪ್ರತೀಕ್ ಎಂದು ಕರೆಯಲ್ಪಡುವ ವ್ಯಕ್ತಿಯು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನೀರಿನ ಬಾಟಲಿಯನ್ನು ಖರೀದಿಸಿದ ಆಘಾತವನ್ನು ವ್ಯಕ್ತಪಡಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ಆ ವ್ಯಕ್ತಿ ಬಾಟಲಿಯ ಮುಚ್ಚಳವನ್ನು ತೆರೆಯುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಈ ವೇಳೆ ಆತನ ಹೆಂಡತಿ ನೀರಿನ ಬಾಟಲಿಯ ಬೆಲೆ ಎಷ್ಟು ಎಂದು ಕೇಳಿದ್ದಾಳೆ. ಆಗ ಉತ್ತರಿಸಿದ ಪ್ರತೀಕ್ ಇದು ನನ್ನ ಜೀವನದ ಅತ್ಯಂತ ದುಬಾರಿ ನೀರಿನ ಬಾಟಲಿ ಎಂದು ತಿಳಿಸಿದ್ದಾರೆ.
ಭಾರತೀಯ ರೈಲುಗಳಲ್ಲಿ ಮಾರಾಟಗಾರರು ನೀರಿನ ಬಾಟಲಿಗಳನ್ನು 10 ರೂ ಅಥವಾ 20 ರೂ. ಕಡಿಮೆ ಬೆಲೆಗೆ ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ನೆನಪಿಸಿಕೊಂಡ ವ್ಲಾಗರ್ ಯುರೋಪಿಯನ್ ರೈಲುಗಳು ಸಂಪೂರ್ಣವಾಗಿ ಮಾರಾಟಗಾರರಿಂದ ಮುಕ್ತವಾಗಿವೆ ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಪ್ರತೀಕ್ ಮತ್ತು ಆತನ ಪತ್ನಿ ನಾಲ್ಕು ಗಂಟೆಗಳ ಕಾಲ ನೀರು ಅಥವಾ ಆಹಾರವಿಲ್ಲದೆ ರೈಲಿನಲ್ಲಿ ಕುಳಿತಿದ್ದರು. ಈ ವೇಳೆ ನೀರಿನ ಬಾಟಲಿಯನ್ನು ಖರೀದಿಸಲು ರೆಸ್ಟೋರೆಂಟ್ ಬೋಗಿಗೆ ಹೋಗಿದ್ದಾರೆ. ಆ ವ್ಯಕ್ತಿ ತೆಗೆದುಕೊಂಡ ಗಾಜಿನ ಬಾಟಲಿಯ ಬೆಲೆ ಕೇವಲ 50 ರೂ ಆಗಿದ್ದು, ಅದನ್ನು ಮರುಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರತೀಕ್ ಹಾಗಿದ್ದರೆ, ನಾನು ನೀರು ಕುಡಿದು ಬಾಟಲಿಯನ್ನು ಹಿಂತಿರುಗಿಸುತ್ತೇನೆ" ಎಂದು ಅವರು ತಮಾಷೆ ಮಾಡಿದರು. ಇದು ನೀರಿನ ಬೆಲೆ ಎಷ್ಟು ದುಬಾರಿಯಾಗಿದೆ ಎಂಬುದನ್ನು ತೋರಿಸುತ್ತದೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿದಂತಹ ಸಂದರ್ಭದಲ್ಲಿ ಪ್ರತೀಕ್ ಭಾರತೀಯ ರೈಲುಗಳನ್ನು ನೆನೆಪು ಮಾಡಿಕೊಂಡು ಶೀರ್ಷಿಕೆ ಬರೆದಿದ್ದಾರೆ. ಈ ರೈಲಿನಲ್ಲಿ ಪಾಪ್ಕಾರ್ನ್ ಮಾರಲು ಯಾವುದೇ ಒಬ್ಬ ವ್ಯಕ್ತಿಯೂ ಬರಲಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ, ನೆಟ್ಟಿಗರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದು, ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ನಾನು ಯುರೋಪಿನಲ್ಲಿ ಹೆಚ್ಚು ಪ್ರಯಾಣಿಸಿದಂತೆ, ಭಾರತವು ಪ್ರವಾಸಿಗರಿಗೆ ನೀಡುವ ಎಲ್ಲಾ ಅನುಕೂಲಗಳನ್ನು ನಾನು ಹೆಚ್ಚು ಗೌರವಿಸಲು ಪ್ರಾರಂಭಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)