ಪಟಾಕಿ ಕೊಡುವ ನೆಪದಲ್ಲಿ 8 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ; ವ್ಯಕ್ತಿ ಬಂಧನ!

Untitled design (66)
Published on

ಮುಂಬೈ: ಪಟಾಕಿ ಕೊಡಿಸುವುದಾಗಿ ಆಮಿಷವೊಡ್ಡಿ ಎಂಟು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದ್ರೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅಪ್ರಾಪ್ತ ಬಾಲಕ ತನ್ನ ಮನೆಯ ಬಳಿ ಪಟಾಕಿ ಹೊಡೆಯುವಾಗ ಈ ಘಟನೆ ಸಂಭವಿಸಿದೆ. ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸುತ್ತಿದ್ದ ಬಾಲಕ ಮೋಜಿನಿಂದ ಸಂಭ್ರಮಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿ ಇನ್ನೂ ಹೆಚ್ಚಿನ ಪಟಾಕಿಗಳನ್ನು ಕೊಡಿಸುವುದಾಗಿ ಭರವಸೆ ನೀಡಿ, ಹತ್ತಿರದ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಬಾಲಕನಿಗೆ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಕೊಲ್ಲುವುದಾಗಿ  ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಬಾಲಕ ಮನೆಯಲ್ಲಿ ಯಾರಿಗೂ ಹೇಳಿಲ್ಲ. ಆತ ಅಳುತ್ತಿರುವುದನ್ನು ಕಂಡು ಪೋಷಕರು ಒತ್ತಾಯಿಸಿ ಕಾರಣ ಕೇಳಿದ್ದಾರೆ. ತದನಂತರ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ. ಕೂಡಲೇ ಪೋಷಕರು ಆಂಟೋಪ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಈಗಾಗಲೇ ಎರಡು ಕಿರುಕುಳ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net