VIDEO| ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಪತ್ನಿಗೆ ಕುದಿಯುವ ಎಣ್ಣೆ ಪರೀಕ್ಷೆ: ಶೀಲ ಸಾಬೀತಿಗೆ ಗಂಡನ ತಾಕೀತು!

Maharashtra Man
Published on

ಪುಣೆ: ತಾಂತ್ರಿಕವಾಗಿ ದೇಶವು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ಅನೇಕ ಪೌರಾಣಿಕ ಪುರುಷರು ತಮ್ಮ ಪತ್ನಿಯರ ಶೀಲದ ಮೇಲೆ ಸಂಶಯ ವ್ಯಕ್ತಪಡಿಸಿ ಅವರಿಗೆ ಪರೀಕ್ಷೆ ಒಡ್ಡಿದಂತಹ ಅನೇಕ ಘಟನೆಗಳನ್ನು ಕೇಳಿದ್ದೇವೆ. ಅದೇ ರೀತಿಯ ಕಲಿಯುಗದಲ್ಲೂ ಇಲ್ಲೊಬ್ಬ ವ್ಯಕ್ತಿ ಕುದಿಯುವ ಎಣ್ಣೆಗೆ ಪತ್ನಿಯ ಕೈಹಾಕಿಸಿದ್ದಾನೆ.

ಮಹಾರಾಷ್ಟ್ರದ ಉಸ್ಮಾಬಾದ್​ ಜಿಲ್ಲೆಯ ಪರಾಂಡದಲ್ಲಿರುವ ಕಚಪುರಿ ಚೌಕ್​ನ ನಿವಾಸಿಯಾದ ಕಾರು ಚಾಲಕ ಮತ್ತು ಪತ್ನಿಯ ನಡುವೆ ಫೆ.11ರಂದು ಜಗಳ ನಡೆಯುತ್ತದೆ. ಈ ವೇಳೆ ಗಂಡನ ಮೇಲೆ ಕೋಪಗೊಂಡ ಪತ್ನಿ ಹೇಳದೇ ಕೇಳದೆ ಮನೆ ಬಿಟ್ಟು ಹೋಗುತ್ತಾಳೆ. ಬಳಿಕ ನಾಲ್ಕು ದಿನಗಳವರೆಗೆ ಆಕೆಯ ಸುಳಿವು ಸಿಗುವುದೇ ಇಲ್ಲ. ಐದನೇ ದಿನ ಪತ್ನಿಯೇ ಗಂಡನಿಗೆ ಫೋನಾಯಿಸಿ ಮನೆಗೆ ಬರುತ್ತಿರುವುದಾಗಿ ಹೇಳುತ್ತಾಳೆ. ಬಂದ ಬಳಿಕ ತಾನು ನಾಲ್ಕು ದಿನ ಎಲ್ಲಿದ್ದೆ ಎಂಬುದನ್ನು ವಿವರಿಸುತ್ತಾಳೆ.

ಜಗಳದ ನಂತರ ಮನೆ ಬಿಟ್ಟ ದಿನದಂದು ಆಕೆ ಕಚಪುರಿ ಚೌಕ್​ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿರುತ್ತಾಳೆ. ಈ ವೇಳೆ ಇಬ್ಬರು ಪುರುಷರು ಬಂದು ಆಕೆಯನ್ನು ಬಲವಂತವಾಗಿ ಬೈಕ್​ನಲ್ಲಿ ಕರೆದೊಯ್ಯುತ್ತಾರೆ. ನಾಲ್ಕು ದಿನಗಳ ತಮ್ಮೊಂದಿಗೆ ಇರಿಸಿಕೊಂಡಿದ್ದರು. ಆದರೆ, ಏನೂ ನಡೆದಿಲ್ಲ ಎನ್ನುತ್ತಾಳೆ. ನಾಲ್ಕನೇ ದಿನ ಹೇಗೋ ಅವರಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಪತಿಯ ಮುಂದೆ ವಿವರಿಸುತ್ತಾಳೆ.

ಆದಾಗ್ಯು ಆಕೆಯ ಪತಿ ಯಾವುದನ್ನು ನಂಬಲು ತಯಾರಿರುವುದಿಲ್ಲ. ಪತ್ನಿಯ ಶೀಲದ ಮೇಲೆ ಸಂಶಯ ವ್ಯಕ್ತಪಡಿಸುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಆಕೆ ಶೀಲವನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಮುಂದುವರಿದ ಭಾಗವಾಗಿ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಸುರಿದು ಚೆನ್ನಾಗಿ ಕುದಿಯಿಸಿ ಅದರೊಳಗೆ 5 ರೂ. ನಾಣ್ಯವನ್ನು ಹಾಕಿ, ಅದನ್ನು ಬರಿಗೈನಿಂದ ತೆಗೆಯುವಂತೆ ಪತ್ನಿಗೆ ಹೇಳುತ್ತಾನೆ. ನೀನು ತಪ್ಪು ಮಾಡಿದ್ದರೆ ನಿನ್ನ ಕೈಕಾಲುಗಳು ಸುಡುತ್ತವೆ ಎಂದಿದ್ದಾನೆ.

ಗಂಡನ ಕಿರುಕುಳ ಹಾಗೂ ಬಲವಂತಕ್ಕೆ ಮಣಿಯುವ ಪತ್ನಿ ನಾಣ್ಯ ತೆಗೆಯಲು ಮುಂದಾಗಿ ಕುದಿಯುವ ಎಣ್ಣೆಗೆ ಕೈಹಾಕುತ್ತಾಳೆ. ಆದರೆ, ಇದರಿಂದ ಆಕೆ ಕೈ ಸುಟ್ಟುಕೊಳ್ಳುತ್ತಾಳೆ. ಇಷ್ಟು ದೃಶ್ಯವನ್ನು ಪತಿರಾಯ ತನ್ನ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಸಂತ್ರಸ್ತ ಮಹಿಳೆಯ ಗಂಡನ ನಡೆಗೆ ಆಕ್ರೋಶಗೊಂಡಿರುವ ಮಹಿಳಾ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಗುಂಪು ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ವಿಧಾನ ಪರಿಷತ್ತಿನ ಅಧ್ಯಕ್ಷರು ನೀಲಮ್​ ಗೊರ್ಹೆ ಘಟನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಾಲಕನಿಗೆ ಗಂಭೀರವಾರ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net