

ಪುದುಚೇರಿ: ತನಿಖಾ ಸಂಸ್ಥೆಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಯನ್ನು ಸದ್ಯ ಪೊಲೀಸರು ಬಂಧಿಸಿದ ಘಟನೆ ಪುದುಚೇರಿಯಲ್ಲಿ ವರದಿಯಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿಯನ್ನು ಭಾನುವಾರ (ಅ.22) ತಡರಾತ್ರಿ ಬಂಧಿಸಲಾಗಿದ್ದು, ಕೆಲವು ಶಾಸಕರ ನಿವಾಸಗಳಿಗೆ ಭೇಟಿ ಮಾಡಿ ಅವರ ಒಟ್ಟು ಆದಾಯ ಮತ್ತು ಆಸ್ತಿ ವಿವರಗಳನ್ನು ಪ್ರಶ್ನಿಸಿದ ಬೆನ್ನಲ್ಲೇ ಪೊಲೀಸರ ಜಾಲಕ್ಕೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಔಲ್ಗರೆಟ್ ಕ್ಷೇತ್ರವನ್ನು ಪ್ರತಿನಿಧಿಸುವ ಸ್ವತಂತ್ರ ಶಾಸಕ ಶಿವಶಂಕರ್ ಅವರ ನಿವಾಸಕ್ಕೆ ಈ ವ್ಯಕ್ತಿ ಭಾನುವಾರ ಭೇಟಿ ನೀಡಿದ್ದು, ತಾನು ಚೆನ್ನೈ ಕಚೇರಿಯ ಜಾರಿ ನಿರ್ದೇಶನಾಲಯದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇಡಿ ಅಧಿಕಾರಿ ಎಂದು ಹೇಳಿದ ವ್ಯಕ್ತಿ, ಸ್ಕೂಟರ್ನಲ್ಲಿ ಶಾಸಕರ ಮನೆಗೆ ಎಂಟ್ರಿ ಕೊಟ್ಟಿದ್ದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ವಿವರಿಸಿದ ಶಾಸಕ ಶಿವಶಂಕರ್, "ತಾನು ಇಡಿ ಅಧಿಕಾರಿ ಎಂದು ಹೇಳಿಕೊಂಡು ಸ್ಕೂಟರ್ನಲ್ಲಿ ಈ ವ್ಯಕ್ತಿ ಭೇಟಿ ನೀಡಿದರು. ಕೂಡಲೇ ನನಗೆ ಅನುಮಾನ ಬಂದಿತು. ಆತನ ನಡೆಯನ್ನು ಶಂಕಿಸಿ, ನಿಮ್ಮ ಅಧಿಕೃತ ಗುರುತಿನ ಚೀಟಿ ಕೊಡಿ ಎಂದು ಕೇಳಿದೆ. ಇದಕ್ಕೆ ಇಲ್ಲ ಎಂದು ಹೇಳಿದರು. ಹೋಗಲಿ ನಿಮ್ಮ ಕಚೇರಿಯ ಫೋನ್ ನಂಬರ್ ಕೊಡಿ ಎಂದು ಕೇಳಿದಾಗ, ಆ ವ್ಯಕ್ತಿ ಅದು ನನ್ನ ಬಳಿ ಇಲ್ಲ ಎಂದು ಉತ್ತರಿಸಿದರು" ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಅನುಮಾನ ಬಲವಾದ ಕೂಡಲೇ ರೆಡ್ಡಿಯಾರ್ಪಾಳ್ಯಂ ಪೊಲೀಸರನ್ನು ಸಂಪರ್ಕಿಸಿ ವ್ಯಕ್ತಿಯನ್ನು ಅವರಿಗೆ ಒಪ್ಪಿಸಿದ ಶಾಸಕರಿಗೆ ವ್ಯಕ್ತಿ ತನ್ನ ಹೆಸರು ಅರುಣ್ ಕುಮಾರ್ ಅಲಿಯಾಸ್ ಆಳ್ವಾರ್ ಎಂದು ಹೇಳಿದ್ದಾನೆ. ಈ ವ್ಯಕ್ತಿ ಪುದುಚೇರಿಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರಿದ ಏಳು ಶಾಸಕರನ್ನು ಇಲ್ಲಿಯವರೆಗೂ ಭೇಟಿಯಾಗಿದ್ದಾನೆ ಎಂದು ಶಾಸಕ ಶಿವಶಂಕರ್ ತಿಳಿಸಿದ್ದಾರೆ,(ಏಜೆನ್ಸೀಸ್).