ಸರ್ಕಾರಿ ಅಧಿಕಾರಿಯ ಸೋಗು ಹಾಕಿದ, ಉದ್ಯೋಗ ಖಾತ್ರಿ ಮಾಡಿಸುವೆ ಎಂದ !

feb6
Published on

ಗೌಹಾಟಿ: ಸರ್ಕಾರಿ ಉದ್ಯೋಗ ಪಡೆಯಲು ಜನರಲ್ಲಿ ಇರುವ ತವಕ ಎಲ್ಲರಿಗೂ ತಿಳಿದದ್ದೇ. ತಮಗೆ ಬೇಕಾದ ಹುದ್ದೆಗಳನ್ನು ಪಡೆಯಲು ಮೇಲಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ಕೊಡಲು ಹಲವರು ತಯಾರಾಗಿರುತ್ತಾರೆ. ಉದ್ಯೋಗಾಕಾಂಕ್ಷಿಗಳ ಈ ವೀಕ್​ನೆಸ್​ಅನ್ನು ಬಳಸಿಕೊಂಡು ದುಡ್ಡು ಮಾಡಲು ಹೊರಟ ಖದೀಮನೊಬ್ಬನನ್ನು ಗೌಹಾಟಿ ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯೊಬ್ಬ ಅಸ್ಸಾಂ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಯುವಕನೊಬ್ಬನಿಗೆ ದೂರವಾಣಿ ಕರೆ ಮಾಡಿದ್ದಾನೆ. ಹಣ ನೀಡಿದರೆ ಉದ್ಯೋಗ ಖಾತ್ರಿ ಮಾಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ಈ ಬಗ್ಗೆ ಯುವಕ ಗೌಹಾಟಿ ಪೊಲೀಸ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕರೆಯನ್ನು ಟ್ರೇಸ್ ಮಾಡಿದಾಗ ಜಾರ್ಖಂಡಿನ ಜಮಶೇಡ್​ಪುರದಿಂದ ಕರೆ ಮಾಡಿರುವುದು ತಿಳಿದುಬಂತು. ಈ ಮಾಹಿತಿಯನ್ನು ಅನುಸರಿಸಿ, ಗೌಹಾಟಿ ಪೊಲೀಸ್ ತಂಡ ಜಮಶೇಡ್​ಪುರಕ್ಕೆ ಭೇಟಿ ನೀಡಿ 27 ವರ್ಷದ ಕಾಮೇಶ್ ಪಾಲ್ ಎಂಬುವವನನ್ನು ಬಂಧಿಸಿದರು.

ವಿಚಾರಣೆ ನಡೆಸಿದಾಗ, ಸರ್ಕಾರಿ ಅಧಿಕಾರಿಯ ಸೋಗು ಹಾಕಿಕೊಂಡು ಅಸ್ಸಾಂ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಯುವಕರಿಗೆ ಈ ರೀತಿಯಾಗಿ ಕರೆ ಮಾಡಿ ಹಣ ಕೇಳುತ್ತಿದ್ದುದನ್ನು ಕಾಮೇಶ್ ಒಪ್ಪಿಕೊಂಡಿದ್ದಾನೆ. ಸ್ವತಃ ನಿರುದ್ಯೋಗಿಯಾದ ಕಾಮೇಶ್ ಜಾರ್ಖಂಡಿನ ಗರ್​ಹ್ವಾ ಜಿಲ್ಲೆಯ ಛೌಕರಿ ಎಂಬ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net